ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಕನ್ನಡ ಸಮಾಜ ಪಣಜಿ ಕಳೆದ 40 ವರ್ಷಗಳಿಂದ ಗೋವಾದಲ್ಲಿ ಕನ್ನಡದ ಕಂಪನ್ನು ಹರಡುತ್ತಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಗೋವಾದಲ್ಲಿ ಕನ್ನಡಿಗರನ್ನು ಕಾರ್ಯಕ್ರಮಗಳ ಮೂಲಕ ಒಂದೆಡೆ ಸೇರಿಸುತ್ತ ಬಂದಿದೆ.

ಪ್ರಸಕ್ತ ವರ್ಷ ಗೋವಾ ಕನ್ನಡ ಸಮಾಜದ ಮಾಣಿಕ್ಯ ಮಹೋತ್ಸವ ವರ್ಷವಾಗಿದ್ದು ವಿಶೇಷ ಕಾರ್ಯಕ್ರಮ ಆಯೋಜಿಸುವುದು ಮಾತ್ರವಲ್ಲದೆಯೇ ವಿಶೇಷ ಸಂಚಿಕೆಯನ್ನು ಹೊರತರಲು ಕೂಡ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಗೋವಾ ಕನ್ನಡ ಸಮಾಜ ಪಣಜಿ ಮಾಣಿಕ್ಯ ಮಹೋತ್ಸವ ಸಮೀತಿಯನ್ನು ರಚಿಸಿ ಅದರ ಅಧ್ಯಕ್ಷರನ್ನಾಗಿ ಹಿರಿಯ ಕನ್ನಡಿಗರಾದ ಸುರೇಶ್ ಶಾನಭೋಗ್ ರವರನ್ನು ಆಯ್ಕೆ ಮಾಡಿದೆ. ಶನಿವಾರ ಸಂಜೆ ಪಣಜಿಯ ನವರತ್ವ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಮಾಣಿಕ್ಯ ಮಹೋತ್ಸವ ಕಾರ್ಯಕ್ರಮ ಹಾಗೂ ವಿಶೇಷ ಸಂಚಿಕೆ ಬಿಡುಗಡೆ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್, ಉಪಾಧ್ಯಕ್ಷರಾದ ಶ್ರೀನಿವಾಸ್ ಪೈ, ಪ್ರಶಾಂತ ಜೈನ್ , ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕಾರ್ಯದರ್ಶಿ ಶ್ರೀಕಾಂತ ಲೋಣಿ, ಸಮೀತಿಯ ಸದಸ್ಯರಾದ ಸಿ.ಜಿ.ಕಣ್ಣೂರ್, ನೀರಜ್ ದಿವಾಕರ್, ಚಿನ್ಮಯ ಎಂ.ಸಿ, ವಿಶೇಷ ಆಹ್ವಾನಿತರಾದ ಕೆನರಾ ಬ್ಯಾಂಕ್ ಮ್ಯಾನೇಜರ್ ನವೀನ್ ಕುಮಾರ್ ಉಪಸ್ಥಿತರಿದ್ದರು.