ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದ ಗ್ರಾಮೀಣ ಭಾಗದಲ್ಲಿ ಸದ್ಯ ಪ್ರತಿದಿನ ಮಳೆಯಾಗುತ್ತಿದ್ದು ಕೃಷಿಕರು ಕಂಗಲಾಗಿದ್ದಾರೆ. ಕಟಾವಿಗೆ ಬಂದಿದ್ದ ಭತ್ತದ ತೆನೆ ನೆಲಕಚ್ಚಿದೆ. ಗೋವಾದ ಬಿಚೋಲಿ ವಾಳಪೈ ಭಾಗದಲ್ಲಿ ಮಳೆಗೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಹಾನಿ ಸಂಭವಿಸಿದೆ.
ಕಳೆದ ಎರಡು ದಿನಗಳಿಂದ ಸಂಜೆಯ ವೇಳೆ ಈ ಭಾಗದಲ್ಲಿ ಗುಡುಗು ಮಳೆ ಆಗುತ್ತಿದ್ದು ಇದರಿಂದಾಗಿ ಬತ್ತದ ಬೆಳೆಗೆ ಹಾನಿ ಉಂಟಾಗಿದೆ.
ಗೋವಾ ರಾಜ್ಯದಲ್ಲಿ ಕಳೆದ ಶುಕ್ರವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆ ಆಗಿದೆ. ಅಂದು ಕೇವಲ ಅರ್ಧ ಗಂಟೆಯಲ್ಲಿ ಗೋವಾ ರಾಜಧಾನಿ ಪಣಜಿಯಲ್ಲಿ 60 ಮಿಲಿ ಮೀಟರ್ ಅಂದರೆ ಎರಡು ಇಂಚು ಮಳೆ ದಾಖಲಾಗಿದೆ. ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ಪಣಜಿಯಲ್ಲಿ ಪ್ರಮುಖ ರಸ್ತೆಗಳು ಜಲಾವೃತಗೊಂಡಿತು. ಅಂದು ಗುಡುಗು ಮಿಂಚಿನ ಸಂದರ್ಭದಲ್ಲಿ ಪಣಜಿ ಸಮೀಪದ ತಾಳಗಾವ್ ನಲ್ಲಿ ಕಟ್ಟಡ ಒಂದರ ಮೇಲೆ ಸಿಡಿಲು ಬಡಿದಿದೆ. ಅದೃಷ್ಟವಶಾತ್ ಹೆಚ್ಚಿನ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಭತ್ತದ ಪೈರು ಕಟಾವಿಗೆ ಬಂದಾಗಿನಿಂದ ಆಗಾಗ ಮಳೆಯಾಗುತ್ತಲೇ ಇದೆ. ಇದರಿಂದಾಗಿ ಕೃಷಿಕರು ಕಂಗಾಲಾಗುವಂತಾಗಿದೆ. ಸದ್ಯ ದಿನವಿಡೀ ಮಳೆಯಾಗದಿದ್ದರೂ ಕೂಡ ದಿನಕ್ಕೆ ಒಂದು ಬಾರಿ ಮಳೆ ಬಂದರೂ ಹಾನಿ ತಪ್ಪಿದ್ದಲ್ಲ ಎಂಬಂತಾಗಿದೆ.