ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಸಾವರ್ಡೆ ಕ್ಷೇತ್ರದ ಶಾಸಕ ಗಣೇಶ ಗಾಂವಕರ್ ರವರು ಗೋವಾ ವಿಧಾನಸಭೆಯ ಸಭಾಪತಿಗಳಾಗಿ ಆಯ್ಕೆಯಾಗಿದ್ದಾರೆ. ಇವರು 32 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೇಸ್ ಶಾಸಕ ಎಲ್ಟನ್ ಡಿಕಾಸ್ತಾ ರವರನ್ನು ಪರಾಭವಗೊಳಿಸಿದ್ದಾರೆ. ಡಿಕಾಸ್ತಾ ರವರು 7 ಮತಗಳನ್ನು ಪಡೆದುಕೊಂಡಿದ್ದರು. ಸಭಾಪತಿಗಳ ಆಯ್ಕೆಗಾಗಿ ಗುರುವಾರ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು.
ರಮೇಶ ತವಡಕರ್ ರವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಸ್ಥಾನ ಖಾಲಿಯಾಗಿತ್ತು.
ನೂತನ ಸಭಾಪತಿಗಳಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಶುಭಾಷಯ ಕೋರಿ- ನಿಮ್ಮ ಅಧ್ಯಕ್ಷತೆಯಲ್ಲಿ ಸದನದ ಕಲಾಪಗಳು ಅತ್ಯಂತ ಘನತೆ ಮತ್ತು ದಕ್ಷತೆಯಿಂದ ನಡೆಯುತ್ತದೆ ಎಂಬ ವಿಶ್ವಾಸ ನನಗಿದೆ. ಈ ಮಹತ್ವದ ಸಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಶುಭ ಕೋರಿದರು.
ಪ್ರತಿಪಕ್ಷದ ನಾಯಕ ಯೂರಿ ಅಲೆಮಾಂವ ಶುಭಾಷಯ ಕೋರಿ-ಈ ಹಿಂದೆ ನಡೆಯುತ್ತಿದ್ದಂತೆ ರಾಜಕೀಯ ಅಥವಾ ಪಕ್ಷಪಾತವನ್ನು ಸಭಾಗೃಹದಲ್ಲಿ ನಡೆಸಬಾರದು. ಗಾಂವಕರ್ ರವರು ತಮ್ಮ ಅನುಭವವನ್ನು ಒಳ್ಳೆಯದಕ್ಕಾಗಿ ಬಳಕೆ ಮಾಡಬೇಕು ಎಂದು ಹೇಳಿ ಪ್ರತಿಪಕ್ಷದ ನಾಯಕ ಯೂರಿ ಅಲೆಮಾಂವ ರವರು ಸಭಾಪತಿಗಳಾಗಿ ಆಯ್ಕೆಯಾದ ಗಣೇಶ ಗಾಂವಕರ್ ರವರಿಗೆ ಶುಭಾಷಯ ಕೋರಿದರು.