ಸುದ್ಧಿಕನ್ನಡ ವಾರ್ತೆ
ಪಣಜಿ: ಸೆಪ್ಟೆಂಬರ್ 15 ರವರೆಗೆ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಅದರಂತೆ, ಈ ಮೂರು ದಿನಗಳವರೆಗೆ ರಾಜ್ಯದಲ್ಲಿ ‘ಯಲ್ಲೊ ಅಲರ್ಟ’ ನೀಡಲಾಗಿದೆ. ಶನಿವಾರ ಬೆಳಿಗ್ಗೆಯಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಳೆಯಿಂದಾಗಿ ವಾತಾವರಣದಲ್ಲಿ ಉಷ್ಣತೆ ಕಡಿಮೆಯಾಗಿದೆ.

 

ರಾಜ್ಯದಲ್ಲಿ ಗರಿಷ್ಠ ತಾಪಮಾನ 29 ರಿಂದ 30 ಡಿಗ್ರಿ ಸೆಲ್ಸಿಯಸ್ ಮತ್ತು ಮುಂದಿನ ಆರು ದಿನಗಳವರೆಗೆ ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಆಗಿರಬಹುದು. ಅಲ್ಲದೆ, ಸೆಪ್ಟೆಂಬರ್ 16 ಮತ್ತು 19 ರ ನಡುವೆ ರಾಜ್ಯದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಶನಿವಾರ, ಪಣಜಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಮತ್ತು ಕನಿಷ್ಠ ತಾಪಮಾನ 25.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಗಾರ್ಂವ್‍ನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಮತ್ತು ಕನಿಷ್ಠ ತಾಪಮಾನ 25.6 ಡಿಗ್ರಿ ಸೆಲ್ಸಿಯಸ್ ಆಗಿತ್ತು.

 

ಜೂನ್ 1 ರಿಂದ ಸೆಪ್ಟೆಂಬರ್ 13 ರವರೆಗೆ ಗೋವಾ ರಾಜ್ಯದಲ್ಲಿ ಸರಾಸರಿ 116.05 ಇಂಚು ಮಳೆ ದಾಖಲಾಗಿದ್ದು, ಇದು ಈ ವರ್ಷದ ಸರಾಸರಿಗಿಂತ ಶೇ. 3.6 ರಷ್ಟು ಹೆಚ್ಚಾಗಿದೆ. ಸಾಂಗೆಯಲ್ಲಿ 153.72 ಇಂಚು, ಧಾರಾಬಾಂದೋಡಾದಲ್ಲಿ 151.58 ಇಂಚು, ವಾಲ್ಪೈನಲ್ಲಿ 150 ಇಂಚು, ಕೆಪೆಯಲ್ಲಿ 141.80 ಇಂಚು, ಫೆÇೀಂಡಾದಲ್ಲಿ 123.73 ಇಂಚು, ಸಾಖಳಿಯಲ್ಲಿ 119.28 ಇಂಚು, ಪೆಡ್ನೆದಲ್ಲಿ 113.50 ಇಂಚು, ಕಾಣಕೋಣ ನಲ್ಲಿ 111.75 ಇಂಚು, ಓಲ್ಡ್ ಗೋವಾದಲ್ಲಿ 110.06 ಇಂಚು ಮತ್ತು ಮಾಪುಸಾದಲ್ಲಿ 98 ಇಂಚು ಮಳೆ ದಾಖಲಾಗಿದೆ.