ಸುದ್ಧಿಕನ್ನಡ ವಾರ್ತೆ
ಪಣಜಿ: ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬೋಟ್ ಅಲೆಗಳ ಹೊಡೆತಕ್ಕೆ ಮುಗುಚಿಬಿದ್ದ ಭೀಕರ ಘಟನೆಯ ನಡುವೆಯೂ ಬೋಟ್ ನಲ್ಲಿದ್ದ ಎಲ್ಲ ಮೀನುಗಾರರು ಆಶ್ಚರ್ಯಕರ ರೀತಿಯಲ್ಲಿ ಪಾರಾದ ಘಟನೆ ಗೋವಾ ಕರಾವಳಿಯಲ್ಲಿ ನಡೆದಿದೆ.

ಗೋವಾದ ವಾಗಾತೋರ್-ಹಣಜುಣ ಕರಾವಳಿಯಲ್ಲಿ ನಡೆದ ಘಟನೆಯಲ್ಲಿ, ನಾಲ್ವರು ಮೀನುಗಾರರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೀನುಗಾರಿಕೆಗಾಗಿ ನಾಲ್ವರು ಬೋಟನ್ನು ಸಮುದ್ರಕ್ಕೆ ತೆಗೆದುಕೊಂಡಿದ್ದರು. ಸಮುದ್ರದ ಬಲವಾದ ಅಲೆಗಳ ಹೊಡೆತಕ್ಕೆ ಮೀನುಗಾರರ ಬೋಟ್ ಮಗುಚಿಬಿತ್ತು. ಅವರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಲೈಫ್ ಜಾಕೆಟ್‍ಗಳ ಸಹಾಯವನ್ನು ಪಡೆದರು.

 

ಶಿವೋಲಿಯ ರಾಜ್ ಚೋಡಂಕರ್ (25) ಮತ್ತು ಅವರ ಸಹೋದ್ಯೋಗಿಗಳಾದ ಆಕಾಶ್ (23), ಅಂಜುಲಿ ಎಕ್ಕಾ (25) ಮತ್ತು ಸಂಜಯ್ ಸೆಕ್ಕಾ (24), ಈ ನಾಲ್ವರು ಸಮುದ್ರದಲ್ಲಿ ಮುಳುಗುವ ಸ್ಥಿತಿಯಲ್ಲಿದ್ದರು. ಮುನ್ನೆಚ್ಚರಿಕೆ ವಹಿಸಿ, ರಾಜ್ ತಕ್ಷಣ ತಮ್ಮ ಸ್ನೇಹಿತರನ್ನು ತಮ್ಮ ಮೊಬೈಲ್‍ನಲ್ಲಿ ಸಂಪರ್ಕಿಸಿದರು.

 

ಇದರ ನಂತರ, ಶಿವೋಲಿ-ಗುಡೆಯ ಬ್ರಿಜೇಶ್ ನಾಯಕ್, ಉತ್ಕರ್ಷ್ ಖೋರ್ಜುವೇಕರ್, ವೈಭವ್ ಖೋರ್ಜುವೇಕರ್ ಮತ್ತು ಸರ್ವೇಶ್ ಚೋಡಣಕರ್ ದಡಕ್ಕೆ ಧಾವಿಸಿದರು ಮತ್ತು ಪೆÇಲೀಸರು, ಜೀವರಕ್ಷಕರು ಮತ್ತು ಮಾಪುಸಾ ಅಗ್ನಿಶಾಮಕ ದಳದ ಸಹಾಯದಿಂದ ಎಲ್ಲಾ ಮೀನುಗಾರರನ್ನು ರಕ್ಷಿಸಿದರು. ಮೀನುಗಾರಿಕಾ ಬೋಟ್ ವ್ಯಾಪಕವಾಗಿ ಹಾನಿಗೊಳಗಾಗಿದ್ದರೂ, ನಾಲ್ವರು ಮೀನುಗಾರರು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿರುವುದು ಒಂದು ದೊಡ್ಡ ಸಮಾಧಾನ.