ಸುದ್ಧಿಕನ್ನಡ ವಾರ್ತೆ
ಗೋವಾದಲ್ಲಿ ಕವಿಶೈಲ ಕನ್ನಡ ಸಂಘದ ವತಿಯಿಂದ ಗೋವಾದ ಮಾಪ್ಸಾದಲ್ಲಿ ಕಳೆದ ಅನೇಕ ವರ್ಷಗಳಿಂದ ಕನ್ನಡ ಗಣಪನನ್ನು ಪ್ರತಿಷ್ಠಾಪಿಸಲಾಗುತ್ತಿದೆ. 9 ದಿನಗಳ ಕಾಲ ಪೂಜಿಸಲ್ಪಡುವ ಈ ಕನ್ನಡ ಗಣಪನನ್ನು ಗುರುವಾರ ವಿಸರ್ಜನೆ ಮಾಡಲಾಗುತ್ತಿದೆ.
ಗೋವಾದ ಮಾಪ್ಸಾದ ಬಸ್ ನಿಲ್ದಾಣದ ಸರ್ಕಲ್ ಬಳಿ ಕವಿಶೈಲ ಕನ್ನಡ ಸಂಘದ ವತಿಯಿಂದ ಕನ್ನಡ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಪೂಜೆ, ಮಧ್ಯಾನ್ಹ ಮಹಾಪೂಜೆ, ಮಹಾಮಂಗಳಾರತಿ, ಸಾರ್ವಜನಿಕ ಸನ್ನಸಂತರ್ಪಣೆಯನ್ನೂ ನೆರವೇರಿಸಲಾಗುತ್ತಿದೆ. ಪ್ರತಿ ವರ್ಷದಂತೆಯೇ ಪ್ರಸಕ್ತ ವರ್ಷವೂ ಕೂಡ 9 ದಿನಗಳ ಕಾಲ ಕನ್ನಡ ಗಣಪನನ್ನು ಪೂಜಿಸಲಾಗುತ್ತಿದ್ದು, ಗುರುವಾರ ರಾತ್ರಿ ಕನ್ನಡ ಗಣಪನ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಗಣಪನ ದರ್ಶನಕ್ಕೆ ಪ್ರತಿದಿನ ಗೋವಾದ ವಿವಿದೆಡೆಯಿಂದ ಕನ್ನಡಿಗರು,ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್ ಸೇರಿದಂತೆ ಕನ್ನಡ ಸಂಘದ ಪದಾಧಿಕಾರಿಗಳು ಕನ್ನಡ ಗಣಪನ ಸೇವೆಗೆ ಹೆಚ್ಚಿನ ಶ್ರಮ ವಹಿಸಿ ಅಗತ್ಯ ಎಲ್ಲ ವ್ಯವಸ್ಥೆಯನ್ನೂ ಮಾಡಿದ್ದಾರೆ. ಗುರುವಾರ ರಾತ್ರಿ ಗಣಪನ ವಿಸರ್ಜನೆ ಮೆರವಣಿಗೆಯಲ್ಲಿ ಕರ್ನಾಟಕದ ಬೆಳಗಾವಿ ಭಾಗದಿಂದ ಆಗಮಿಸುವ ಡೋಲು, ನೃತ್ಯ, ಹೀಗೆ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಈ ಕಾರ್ಯಕ್ರಮದಲ್ಲಿಯೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್ ಮನವಿ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ರವರು ಮಾಪ್ಸಾ ಕನ್ನಡ ಗಣಪನ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಗಣಪನ ಬಳಿ ಅಷ್ಟೊತ್ತರ ಶತನಾಮ ಪೂಜೆ, ಮಹಾಮಂಗಳಾರತಿ ಸೇವೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.