ಸುದ್ಧಿಕನ್ನಡ ವಾರ್ತೆ
ಗೋವಾದಲ್ಲಿ ಹೊರ ರಾಜ್ಯದ ಜನರು ಹೆಚ್ಚಳವಾಗಿರುವುದು ಇಲ್ಲಿನ ಭಧ್ರತಾ ಸಮಸ್ಯೆಯನ್ನು ಹೆಚ್ಚಿಸಿದೆ ಎಂದು ಗೋವಾದ ಗ್ರಾಮಸಭೆಯೊಂದರಲ್ಲಿ ಹೊರ ರಾಜ್ಯದ ನಾಗರೀಕರ ಸಮೀಕ್ಷೆ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಹೌದು ಇಂತದ್ದೊಂದು ಚರ್ಚೆ ಗೋವಾದ ಮಡಗಾಂವನ ರಾಯ್ ಪಂಚಾಯತ ಗ್ರಾಮಸಭೆಯಲ್ಲಿ ನಡೆದಿದೆ. ಗೋವಾಕ್ಕೆ ಬಂದಿರುವ ಇತರ ರಾಜ್ಯಗಳ ಜನರ ಎಲ್ಲ ದಾಖಲಾತಿಯನ್ನು ಪೋಲಿಸರು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಕುರಿತು ಸ್ಥಳೀಯ ಪಂಚಾಯತಿಗೆ ಯಾವುದೇ ಅಧೀಕೃತ ಮಾಹಿತಿಯಿಲ್ಲ. ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚುತ್ತಿದೆ, ಇದರಿಂದಾಗಿ ಭಧ್ರತಾ ಸಮಸ್ಯೆಯುಂಟಾಗಿದೆ ಎಂದು ರಾಯ್ ಗ್ರಾಮ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಯ್ ಪಂಚಾಯತ ಅಧ್ಯಕ್ಷೆ ಜಸಿಂತಾ ಡಯಾಸ್ -ಗ್ರಾಮಸ್ಥರ ಬೇಡಿಕೆಯಂತೆಯೇ ವಲಸಿಗರ ಮಾಹಿತಿಯನ್ನು ಪಂಚಾಯತಿ ಸಂಗ್ರಹಿಸುತ್ತಲೇ ಇದೆ ಮತ್ತು ಇದಕ್ಕೆ ಅನುಗುಣವಾಗಿ ಭಧ್ರತಾ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂಬ ಮಾಹಿತಿ ನೀಡಿದರು.
ಗೋವಾದ ಮಡಗಾಂವ ರಾಯ್ ಪಂಚಾಯತ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯಗಳಿಂದ ವಿವಿಧ ಉದ್ಯೋಗ ಅರಸಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯವಾಗಿ ಹೊರ ರಾಜ್ಯದ ಜನರೇ ಹೆಚ್ಚಾಗಿದ್ದಾರೆ. ಹೊರ ರಾಜ್ಯದ ಜನರು ಹೆಚ್ಚುತ್ತಿರುವುದರಿಂದ ವಿವಿಧ ಅಪರಾಧ ಪ್ರಕರಣಗಳೂ ಹೆಚ್ಚುತ್ತಿದೆ. ಭಧ್ರತಾ ಸಮಸ್ಯೆಯುಂಟಾಗುತ್ತಿದೆ ಎಂದು ಗ್ರಾಮಸಭೆಯಲ್ಲಿ ಗಂಭೀರವಾದ ಚರ್ಚೆ ನಡೆಸಲಾಯಿತು.
ಹೊರ ರಾಜ್ಯದ ಜನರ ಗಣತಿ ಏಕೆ…?
ಗೋವಾದ ಮಡಗಾಂವ ರಾಯ್ ಭಾಗದಲ್ಲಿ ಕರ್ನಾಟಕ, ಓಡಿಶಾ, ಭಾಗದ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದು ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ. ಇದರಿಂದಾಗಿ ಹೊರ ರಾಜ್ಯದ ಜನರು ರಾಯ್ ಪಂಚಾಯತ ಭಾಗದಲ್ಲಿ ಎಷ್ಟಿದ್ದಾರೆ…? ಎಂಬ ಸಮೀಕ್ಷೆ ನಡೆಸಲು ರಾಯ್ ಪಂಚಾಯತ ಮುಂದಾಗಿದೆ. ಗೋವಾ ರಾಜ್ಯವು ಪ್ರಮುಖವಾಗಿ ಇತರ ರಾಜ್ಯಗಳ ಜನರನ್ನೇ ಅವಲಂಭಿಸಿರುವುದರಿಂದ ಈ ರೀತಿಯ ನಿರ್ಣಯ ಸರಿಯೆ ಎಂಬ ಪ್ರಶ್ನೆ ಕೂಡ ಕೇಳಿಬರುತ್ತಿದೆ. ಗೋವಾದಲ್ಲಿ ಕೂಲಿ ಕಾರ್ಮಿಕರಿಂದ ಹಿಡಿದು ಸರ್ಕಾರದ ಉನ್ನತ ಹುದ್ದೆಯ ವರೆಗೂ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಜನರು ಕೆಲಸ ನಿರ್ವಹಿಸುತ್ತಿದ್ದಾರೆ.