ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಲಂಗುಟ್ ಬೀಚ್ ಪರಿಸರದಲ್ಲಿ ಭಾನುವಾರ ಬೆಳಗಿನ ಜಾವ ಅಗ್ನಿ ತಾಂಡವವೇ ನಡೆದಿದೆ. ಈ ಅಗ್ನಿ ಅವಗಢದಲ್ಲಿ ಸ್ಥಳೀಯ ಮೀನುಗಾರರ ಎರಡು ಮನೆಗಳು ಸುಟ್ಟು ಭಸ್ಮವಾಗಿದೆ. ಈ ಮನೆಯಲ್ಲಿ ಮೀನುಗಾರಿಕೆಗೆ ಬಳಸುತ್ತಿದ್ದ ವಿವಿಧ ವಸ್ತುಗಳು ಅಗ್ನಿಗಾಹುತಿಯಾಗಿದೆ. ಇದ್ದಕ್ಕಿದ್ದಂತೆಯೇ ಹೊತ್ತಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿ ಎರಡೂ ಮನೆಗಳನ್ನು ಧ್ವಂಸಗೊಳಿಸಿದೆ.
ಈ ಅಗ್ನಿ ಅವಗಢದ ಮಾಹಿತಿ ಲಭಿಸುತ್ತಿದ್ದಂತೆಯೇ ಪರ್ವರಿ ಮತ್ತು ಪಿಳರ್ಣ ಹಾಗೂ ಮಾಪ್ಸಾ ಅಗ್ನಿಶಾಮಕ ದಳದ ತಂಡ ಘಟನಾ ಸ್ಥಳಕ್ಕೆ ದಾಖಲಾಗಿದೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಕೂಡ ಈ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಮನೆಯಲ್ಲಿ ಮೀನುಗಾರಿಕೆಯ ಬಹುತೇಕ ಎಲ್ಲ ಸಾಮಗ್ರಿಗಳೂ ಇದ್ದವು. ಈ ದುರ್ಘಟನೆಯಿಂದಾಗಿ ಮೀನುಗಾರರಿಗೆ ಹೆಚ್ಚಿನ ಹಾನಿಯುಂಟಾಗಿದೆ. ಈ ಘಟನೆಯಲ್ಲಿ ಸುಮಾರು 25 ಲಕ್ಷ ರೂ ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಅಗ್ನಿ ಅವಗಢಕ್ಕೆ ಕಾರಣ ತಿಳಿದುಬಂದಿಲ್ಲ. ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.