ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ತೀವ್ರತೆ ಹೆಚ್ಚಾಗಿದೆ. ಸೋಮವಾರ ರಾಜ್ಯಾದ್ಯಂತ ಸುರಿದ ಭಾರಿ ಮಳೆಗೆ ಹಲವೆಡೆ ರಸ್ತೆಗಳು ಕೂಡ ಜಲಾವೃತಗೊಂಡ ಘಟನೆ ನಡೆದಿದೆ. ಗೋವಾದಲ್ಲಿ ಮಳೆ ಮುಂದುವರೆಯಲಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಅಗಷ್ಟ 25 ರ ವರೆಗೆ ಯಲ್ಲೊ ಅಲರ್ಟ ಜಾರಿಗೊಳಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಇನ್ನು ಕೆಲ ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಗೋವಾದಲ್ಲಿ ವಿಶೇಷವಾಗಿ ನದಿ ಪಾತ್ರದಲ್ಲಿರುವ ಜನರಿಗೆ ಎಚ್ಚರದಿಂದಿರಲು ಸೂಚಿಸಲಾಗಿದೆ. ಗೋವಾ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಯ ನೀರಿನ ಪ್ರಮಾಣ ಯಾವುದೇ ಕ್ಷಣದಲ್ಲೂ ಏರಿಕೆಯಾಗುವ ಆತಂಕವಿದೆ. ವಿಶೇಷವಾಗಿ ಗೋವಾದಲ್ಲಿ ಮಾಂಡವಿ, ಜುವಾರಿ ನದಿಗಳ ನೀರಿನ ಮಟ್ಟದ ಕುರಿತಂತೆ ಹೆಚ್ಚಿನ ಗಮನ ವಹಿಸಲಾಗುತ್ತಿದೆ. ಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಕರ್ನಾಟಕದಲ್ಲಿಯೂ ಭಾರಿ ಮಳೆಯಾಗುತ್ತಿರುವುದರಿಂದ ಮಹದಾಯಿ ನದಿ ನೀರಿನ ಮಟ್ಟ ಕೂಡ ಏರಿಕೆಯಾಗುತ್ತಿದೆ.

ಸ್ಥಳೀಯ ಪ್ರಶಾಸಕ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ. ಅಗ್ನಿಶಾಮಕ ದಳ, ಪೋಲಿಸ್ ಇಲಾಖೆ ಹಾಗೂ ಆಪತ್ಕಾಲೀನ ಸೇವೆಗಳಿಗೆ ಹೈ ಅಲರ್ಟ ನೀಡಲಾಗಿದೆ. ಅಗತ್ಯ ಬಿದ್ದರೆ ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆಯೂ ಸರ್ಕಾರ ಸೂಚನೆ ನೀಡಿದೆ.
ಗೋವಾ ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ಗಾಳಿ ಮಳೆ ಆರಂಭಗೊಂಡಿರುವುದರಿಂದ ಹಲವೆಡೆ ಬೃಹತ್ ಮರಗಳು ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿಯಂಟಾದ ಘಟನೆ ಕೂಡ ನಡೆದಿದೆ. ಗೋವಾ ರಾಜ್ಯದಲ್ಲಿ ಮಳೆ ಮುಂದುವರೆಯಲಿರುವುದರಿಂದ ಜನತೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆಯೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.