ಸುದ್ಧಿಕನ್ನಡ ವಾರ್ತೆ
ಪಣಜಿ: ಭಾರತದ ಕೇಂದ್ರ ಚುನಾವಣಾ ಆಯೋಗವು ಗೋವಾದ ನಾಲ್ಕು ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಿದೆ. ಇವುಗಳಲ್ಲಿ ಯುನೈಟೆಡ್ ಗೋವಾನ್ಸ್ ಪಾರ್ಟಿ, ಗೋವಾ ನ್ಯಾಷನಲಿಸ್ಟ್ ಪಾರ್ಟಿ, ಗೋವಾ ಪ್ರಜಾ ಪಾರ್ಟಿ ಮತ್ತು ಗೋಯಕಾರಂಚೊ ಒಟ್ರಿ ಅಸಾರೊ ಸೇರಿವೆ. ಈ ನಾಲ್ಕು ಪಕ್ಷಗಳು 2019 ರಿಂದ ಯಾವುದೇ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ.

2017 ರ ಗೋವಾ ವಿಧಾನಸಭಾ ಚುನಾವಣೆಗೆ ಮೊದಲು ರಾಜ್ಯ ಕಂದಾಯ ಸಚಿವ ಬಾಬುಶ್ ಮಾನ್ಸೆರಾತ್ ರಚಿಸಿದ ಯುನೈಟೆಡ್ ಗೋವಾನ್ಸ್ ಪಾರ್ಟಿ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ, ಗೋವಾದ ಮುಖ್ಯ ಚುನಾವಣಾ ಅಧಿಕಾರಿ ಕೆಲವು ದಿನಗಳ ಹಿಂದೆ ಪಕ್ಷಕ್ಕೆ ಶೋಕಾಸ್ ನೋಟಿಸ್ ನೀಡಿದ್ದರು. ಜೊತೆಗೆ, ‘ಗೋವಾ ನ್ಯಾಷನಲಿಸ್ಟ್ ಪಾರ್ಟಿ’, ‘ಗೋವಾ ಪ್ರಜಾ ಪಾರ್ಟಿ’ ಮತ್ತು ‘ಗೋಯಕಾರಂಚೊ ಒಟ್ರಿ ಅಸಾರೊ’ ಪಕ್ಷಗಳಿಗೂ ಇದೇ ರೀತಿಯ ನೋಟಿಸ್‍ಗಳನ್ನು ನೀಡಲಾಯಿತು. ತಮ್ಮ ವಾದವನ್ನು ಮಂಡಿಸಲು ಅವರಿಗೆ ಜುಲೈ 15 ರವರೆಗೆ ಸಮಯ ನೀಡಲಾಗಿತ್ತು.

ಬಾಬುಶ್ ಮಾನ್ಸೆರಾತ್ ರವರು 2017 ರಲ್ಲಿ ಪಣಜಿ ಕ್ಷೇತ್ರದಿಂದ ಯುನೈಟೆಡ್ ಗೋವಾನ್ಸ್ ಪಾರ್ಟಿ ಟಿಕೆಟ್‍ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ್ ಕುಂಕೋಳಿಕರ್ ಅವರಿಂದ ಸೋಲು ಅಭವಿಸಿದರು. ರಮಾಕಾಂತ್ ಬೋರ್ಕರ್ ಕೂಡ ಅದೇ ಪಕ್ಷದ ಟಿಕೆಟ್‍ನಲ್ಲಿ ಕುಠ್ಠಾಳಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರು, ಆದರೆ ಅವರು ಸೋಲನ್ನು ಎದುರಿಸಬೇಕಾಯಿತು.

ಯುನೈಟೆಡ್ ಗೋವಾನ್ಸ್ ಪಕ್ಷದ ರಚನೆಯ ನಂತರ, ಮಾಜಿ ಶಾಸಕ ಟೋನಿ ಫೆನಾರ್ಂಡಿಸ್ ಮೊದಲ ಅಧ್ಯಕ್ಷರಾಗಿದ್ದರು. 2017 ರ ಚುನಾವಣೆಗೆ ಮೊದಲು, ಅವರು ಯುಜಿಎಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು. ಅದರ ನಂತರ, ಉದಯ್ ಮಡ್ಕೈಕರ್ ಅಧ್ಯಕ್ಷರಾದರು.

ಕಳೆದ ಆರು ವರ್ಷಗಳಿಂದ, ಮೇಲಿನ ನಾಲ್ಕು ಪಕ್ಷಗಳಲ್ಲಿ ಯಾವುದೂ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಆದ್ದರಿಂದ, ಚುನಾವಣಾ ಆಯೋಗವು ಭಾರತದ ಸಂವಿಧಾನದ 324 ನೇ ವಿಧಿ ಮತ್ತು 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29 ಎ ಅಡಿಯಲ್ಲಿ ಎಲ್ಲಾ ನಾಲ್ಕು ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಿದೆ.