ಸುದ್ಧಿಕನ್ನಡ ವಾರ್ತೆ
ಗೋವಾದಲ್ಲಿ ದಕ್ಷಿಣ ಗೋವಾ ವಿಭಜನೆ ಮಾಡಿ ಮೂರನೇಯ ಜಿಲ್ಲೆಯನ್ನು ಹೊಸದಾಗಿ ಸ್ಥಾಪಿಸಲಾಗುತ್ತಿದ್ದು, ಇದಕ್ಕೆ ಶುಕ್ರವಾರ ಗೋವಾ ಮಂತ್ರಿಮಂಡಲ ಮಂಜೂರಿ ನೀಡಿದೆ. ಹೊಸ ಜಿಲ್ಲೆಯ ಮುಖ್ಯಾಲಯವು ಕೆಫೆ ತಾಲೂಕಿನ ಕುಡಚಡೆಯಲ್ಲಿರಲಿದೆ.

ಗೋವಾದಲ್ಲಿ ಮೂರನೇ ಜಿಲ್ಲೆಯನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯು ಕಳೆದ ಅನೇಕ ವರ್ಷಗಳಿಂದ ಕೇಳಿಬರುತ್ತಿತ್ತು. ಇದೀಗ ಗೋವಾದಲ್ಲಿ ಮೂರನೇಯ ಜಿಲ್ಲೆ ಸ್ಥಾಪನೆಗೆ ಗ್ರೀನ್ ಸಿಗ್ನಲ್ ಲಭಿಸಿದಂತಾಗಿದೆ. ಈ ಪ್ರಸ್ತಾವಕ್ಕೆ ಮಂತ್ರಿಮಂಡಲವು ಮಂಜೂರಿ ನೀಡಿದೆ.

ದಕ್ಷಿಣ ಗೋವಾದ ಧಾರಬಾಂದೋಡ, ಸಾಂಗೆ, ಕೆಫೆ, ಹಾಗೂ ಕಾಣಕೋಣ ಈ 4 ತಾಲೂಕುಗಳು ಸೇರಿ ಹೊಸ ಜಿಲ್ಲೆ ನಿರ್ಮಾಣವಾಗಲಿದೆ. ಈ ಜಿಲ್ಲೆಯ ಮುಖ್ಯಾಲಯವು ಕೆಫೆ ತಾಲೂಕಿನ ಕುಡಚಡೆಯಲ್ಲಿರಲಿದೆ. ಗೋವಾದ ಮೂರನೇಯ ಜಿಲ್ಲೆಯ ಹೆಸರನ್ನು ಇನ್ನೂ ನಿಗಧಿಪಡಿಸಲಾಗಿಲ್ಲ.

ದಕ್ಷಿಣ ಗೋವಾದ ಜನರು ಸರ್ಕಾರಿ ಕೆಲಸಗಳಿಗಾಗಿ ಹೆಚ್ಚು ದೂರು ಓಡಾಟ ನಡೆಸಬೇಕಾಗುತ್ತದೆ. ಈ ಭಾಗದಲ್ಲಿ ಹೆಚ್ಚಾಗಿ ಆದಿವಾಸಿಗಳೇ ಇರುವುದರಿಂದ ಇವರಿಗಾಗಿ ಹೊಸ ಜಿಲ್ಲೆ ಸ್ಥಾಪಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿತ್ತು. ಇದೀಗ ಈ ಹೊಸ ಜಿಲ್ಲೆ ಸ್ಥಾಪನೆಗೆ ಮಂತ್ರಿಮಂಡಲ ಮಂಜೂರಿ ನೀಡಿರುವುದಾಗಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.