ಸುದ್ಧಿಕನ್ನಡ ವಾರ್ತೆ

 ಗ್ರಾಹಕನಂತೆ ಬಂಗಾರದ ಅಂಗಡಿಗೆ ಬಂದು ಅಂಗಡಿ ಮಾಲೀಕನಿಗೆ ಸುತ್ತಿಗೆಯಿಂದ ಹಲ್ಲೆ  (Attack with a hammer) ನಡೆಸಿದ ಆತಂಕಕಾರಿ ಘಟನೆ ಗೋವಾದ ಮಡಗಾಂವ ವಡ್ಡೆ ಎಂಬಲ್ಲಿ ನಡೆದಿದೆ. ಈ ಹಲ್ಲೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆಯಿಂದಾಗಿ ರಾಜ್ಯದಲ್ಲಿರುವ ಇನ್ನುಳಿದ ಬಂಗಾರದ ವ್ಯಾಪಾರಿಗಳು ಭಯಪಡುವಂತಾಗಿದೆ.

ಬಂಗಾರದ ಅಂಗಡಿ ಮಾಲೀಕ ರೋಹನ್ ರಾಯಕರ್(Rohan Raikar) ಎಂಬುವರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಈ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಮಡಗಾಂವ ವಡ್ಡೆಯಲ್ಲಿರುವ ಇಂದಿರಾ ಜ್ಯುವೆಲರ್ಸ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಕೋರನು ಮುಖಕ್ಕೆ ಟವೆಲ್ ಸುತ್ತಿಕೊಂಡು ಅಂಗಡಿಗೆ ಪ್ರವೇಶಿಸಿದ್ದ. ಈ ಹಲ್ಲೆಕೋರ ಅಂಗಡಿ ಮಾಲೀಕ ರೋಹನ್ ರವರ ಮೇಲೆ ಧಾಳಿ ನಡೆಸಿದ ನಂತರ ಯಾವುದೇ ಪ್ರಕಾರದ ಕಳ್ಳತನ ನಡೆಸಲು ಪ್ರಯತ್ನಿಸಿಲ್ಲ ಎನ್ನಲಾಗಿದೆ.
ಇದರಿಂದಾಗಿ ಈ ಹಲ್ಲೆಯು ಕಳ್ಳತನ ನಡೆಸುವ ಉದ್ದೇಶದಿಂದ ನಡೆದದ್ದಲ್ಲ, ಇನ್ಯಾವುದಾದರೂ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತಂತೆ ಮಡಗಾಂವ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖಾ ಕಾರ್ಯ ಕೈಗೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ಮಡಗಾಂವ ಚಾಂದರ್ ನಲ್ಲಿ ವೃದ್ಧರೋರ್ವರ ಮೇಲೆ ಇದೇ ರೀತಿಯ ಹಲ್ಲೆ ನಡೆಸಿ ಧರೋಡೆಕೋರರು 12 ಲಕ್ಷ ರೂ ಬಂಗಾರ ದೋಚಿದ್ದರು. ಈ ಘಟನೆ ಮತ್ತು ಇದೀಗ ನಡೆದಿರುವ ಹಲ್ಲೆ ಘಟನೆಗೆ ಸಂಬಂಧವಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡುವಂತಾಗಿದೆ.
ಮಡಗಾಂವ ಫಟೊರ್ಡಾ ಪೋಲಿಸ್ ನಿರೀಕ್ಷಕ ನೆಥನ್ ಅಲ್ಮೆದಾ ರವರ ನೇತೃತ್ವದಲ್ಲಿ ಉಪನಿರೀಕ್ಷಕ ಎಸ್.ದೇವಿದಾಸ್ ರವರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.