ಸುದ್ಧಿಕನ್ನಡ ವಾರ್ತೆ
ಕೇಂದ್ರದ ಮಾಜಿ ಸಚಿವ ಪುಸಾಪತಿ ಅಶೋಕ್ ಗಜಪತಿ ರಾಜು ರವರು ಜುಲೈ 26 ರಂದು ಗೋವಾ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವು 26 ರಂದು ಬೆಳಿಗ್ಗೆ 11 ಗಂಟೆಗೆ ಗೋವಾ ರಾಜಭವನದಲ್ಲಿ ನಡೆಯಲಿದೆ. ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ರವರು ನೂತನ ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ರಾಷ್ಟ್ರಪತಿಗಳು ಜುಲೈ 14 ರಂದು ಪುಸಾಪತಿ ಅಶೋಕ್ ಗಜಪತಿ ರಾಜು ಅವರನ್ನು ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರ ನಂತರ ನೂತನ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಇತರ ಸಚಿವರು ಮತ್ತು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವು ರವರು ನೂತನ ರಾಜ್ಯಪಾಲರ ನೇಮಕಾತಿಯನ್ನು ಸ್ವಾಗತಿಸಿದ್ದಾರೆ.
ಆಂಧ್ರಪ್ರದೇಶ ವಿಧಾನಸಭೆಯಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಶಾಸಕರಾಗಿರುವ ಪುಸಾಪತಿ ಅಶೋಕ್ ಗಜಪತಿ ರಾಜು ಅವರು 2014 ರಿಂದ 2018 ರವರೆಗೆ ಕೇಂದ್ರ ಸಚಿವರಾಗಿದ್ದರು. ಅವರು ತೆಲುಗು ದೇಶಂ ಪಕ್ಷ ಮತ್ತು ಭಾರತೀಯ ಜನತಾ ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
ಪಿಳ್ಳೈ ಅವರ ಅಧಿಕಾರಾವಧಿ ನಾಲ್ಕು ವರ್ಷಗಳು
ಪಿ. ಎಸ್. ಶ್ರೀಧರನ್ ಪಿಳ್ಳೈ ಅವರು ಜುಲೈ 15, 2021 ರಂದು ಗೋವಾದ 19 ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಗೋವಾದ ರಾಜ್ಯಪಾಲರಾಗಿ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದರು.