ಸುದ್ಧಿಕನ್ನಡ ವಾರ್ತೆ
ಪಣಜಿ: ವಿದ್ಯಾರ್ಥಿಗಳು ಪ್ರತಿದಿನ 15 ನಿಮಿಷವಾದರೂ ಯೋಗಾಭ್ಯಾಸ ಮಾಡಲೇಬೇಕು ಇದರಿಂದಾಗಿ ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಕರೆ ನೀಡಿದರು.

ಪಣಜಿ ಸಮೀಪದ ಬಾಂಬೋಲಿಂ ಬಳಿಯ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂ ನಲ್ಲಿ ಅಂತರಾಷ್ಟ್ರೀಯ ಯೋಗ ದಿನದ  (International Yoga Day) ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಉಪಸ್ಥಿತಿತರಿದ್ದು ಮಾತನಾಡುತ್ತಿದ್ದರು.ಹಲವು ಸಂಸ್ಥೆಗಳು ತಮ್ಮ ಶಾಲೆಯ ಶಿಕ್ಷಕರಿಗೆ ಯೋಗ ತರಬೇತಿ ಕೊಡಿಸುತ್ತಿದ್ದಾರೆ. ಈ ಶಿಕ್ಷಕರಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ ಪ್ರತಿದಿನ ವಿದ್ಯಾರ್ಥಿಗಳಿಗೆ 15 ನಿಮಿಷವಾದರೂ ಯೋಗಾಭ್ಯಾಸ ಮಾಡಿಸಿ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮನವಿ ಮಾಡಿದರು.

ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಏಕಾಗೃತೆ ಹೆಚ್ಚುತ್ತದೆ. ಶಾರೀರಿಕ ಮತ್ತು ಮಾನಸಿಕ ತೊಂದರೆ ಕೂಡ ದೂರವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಶಾರೀರಿಕ ದೃಷ್ಠಿಯಿಂದ ನಿರೋಗಿಯಾಗಿರಬೇಕು. ಶಿಕ್ಷಕರ ಅಥವಾ ಯೋಗ ಗುರುಗಳ ಒತ್ತಡಕ್ಕಾಗಿ ಯೋಗ ಮಾಡುವುದಲ್ಲ. ನಾವು ಸ್ವತಃ ನಮ್ಮ ಕುಟುಂಬದ ಆರೋಗ್ಯಕ್ಕಾಗಿ ಯೋಗ (yOga) ಮಾಡಬೇಕು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಕರೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಅಭಿಮಾನದಿಂದ ಇಂದು ಜಗತ್ತಿನ 180 ಕ್ಕೂ ಅಧಿಕ ದೇಶದಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗವು ಭಾರತ ದೇಶವು ಜಗತ್ತಿಗೆ ನೀಡಿರುವ ಅತಿದೊಡ್ಡ ವರದಾನವಾಗಿದೆ. ಯೋಗ ಮಾಧ್ಯಮದ ಮೂಲಕ ಜಗತ್ತು ಒಂದೆಡೆ ಸೇರಿದೆ ಎಂದರು.

ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಗೋವಾದ ವಿವಿದೆಡೆ ಯೋಗ (Yoga)ದಿನವನ್ನು ಆಚರಿಸಲಾಯಿತು. ಜನರು ಕೂಡ ಸ್ವಯಂಪ್ರೇರಿತರಾಗಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಂಡುಬಂತು.