ಸುದ್ದಿಕನ್ನಡ ವಾರ್ತೆ
Goa : ಗೋವಾ ರಾಜ್ಯದ ಉತ್ತರ ಗೋವಾ ಮತ್ತು ದಕ್ಷಿಣ ಗೋವಾದಲ್ಲಿರುವ ಎಲ್ಲ ಜಲಪಾತಗಗಳಿಗೆ ತೆರಳಲು ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಜಾರಿಗೊಳಿಸಿದೆ. ಈ ಕಾಲಾವಧಿ ಇನ್ನೂ 60 ದಿನಗಳು ಇರಲಿದೆ. ಇದರಿಂದಾಗಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಸೇರಿದಂತೆ ಪ್ರಮುಖ ಜಲಪಾತ ವೀಕ್ಷಣೆ ಅಸಾಧ್ಯವಾಗಿದೆ.
ಗೋವಾದಲ್ಲಿ ಜಾರಿಗೊಳಿಸಲಾಗಿರುವ ಈ ಆದೇಶವನ್ನು ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆ ಖಾಯ್ದೆ ಕಲಂ 223 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಮಳೆಗಾಲದ ಸಂದರ್ಭದಲ್ಲಿ ವಿವಿಧ ಜಲಪಾತಗಳಲ್ಲಿ ನಾಲ್ಕೈದು ಜನ ಪ್ರವಾಸಿಗರು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಗೋವಾದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಗೋವಾದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ಗೋವಾದಲ್ಲಿ ಜಲಪಾತಗಳು ಮತ್ತು ಇತರ ಯಾವುದೇ ಜಲ ಮೂಲಗಳಿಗೆ ತೆರಳಲು ಸಂಪೂರ್ಣ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ.
ರಸ್ತೆ ಅಗೆಯುವಂತಿಲ್ಲ…
ಮಳೆಗಾಲದ ಸಂದರ್ಭದಲ್ಲಿ ಯಾವುದೇ ಕೆಲಸಕ್ಕಾಗಿ ರಸ್ತೆ ಅಗೆಯುವುದನ್ನು ನಿಷೇಧಿಸಿ ಉತ್ತರ ಗೋವಾ ಜಿಲ್ಲಾಡಳಿತವು ಆದೇಶ ಹೊರಡಿಸಿದೆ. ಆದೇಶ ಉಲ್ಲಂಘನೆ ಮಾಡಿದರೆ ಅವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದೆ.