ಸುದ್ಧಿಕನ್ನಡ ವಾರ್ತೆ
Goa : ಕೆಲವು ಸ್ಥಳಗಳಲ್ಲಿ ಸಣ್ಣಪುಟ್ಟ ವಿವಾದಗಳನ್ನು ಹೊರತುಪಡಿಸಿದರೆ ಗೋವಾ ರಾಜ್ಯದಲ್ಲಿ ದೇವಸ್ಥಾನ ಸಮೀತಿ ಚುನಾವಣೆ ಶಾಂತಯುತವಾಗಿ ನಡೆಯಿತು.

ಗೋವಾ ರಾಜ್ಯದ 12 ತಾಲೂಕುಗಳ ಪೈಕಿ 220 ದೇವಸ್ಥಾನದ ಪೈಕಿ 58 ಸ್ಥಳಗಳಲ್ಲಿ ಅವಿರೋಧವಾಗಿ ಹಾಗೂ 12 ದೇವಸ್ಥಾನಗಳ ಚುನಾವಣೆ ರದ್ಧಾಗಿದ್ದು 150 ದೇವಸ್ಥಾನಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿದೆ. ಭಾನುವಾರ ರಾತ್ರಿಯ ವರೆಗೂ ಚುನಾವಣಾ ಪ್ರಕ್ರಿಯೆ ನಡೆದಿದೆ. ಮಂಗಳವಾರ ರಾಜ್ಯ ಸರ್ಕಾರ ಚುನಾವಣೆಯ ಫಲಿತಾಂಶದ ಅಧೀಕೃತ ಘೋಷಣೆ ಮಾಡಲಿದೆ. ಸಾಳ ಮತ್ತು ಮಯೆಯಲ್ಲಿ ವಾದವುಂಟಾದ ಕಾರಣ ಇಲ್ಲಿನ ಚುನಾವಣೆ ಸ್ಥಗಿತಗೊಳ್ಳಲಾಗಿದೆ.
ಪ್ರತಿಷ್ಠೆಯ ಜಾಂಬಾಲಿ, ಬೋಡಗೇಶ್ವರ ದೇವಸ್ಥಾನದಲ್ಲಿ ರಾತ್ರಿಯ ವರೆಗೂ ಚುನಾವಣೆ ಪ್ರಕ್ರಿಯೆ ನಡೆಯುತ್ತಿತ್ತು. ಸಾಖಳಿ ವಿಠ್ಠಲಾಪುರದ ದೇವಸ್ಥಾನದ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಪ್ರತಾಪಸಿಂಹ ರಾಣೆ ಹಾಗೂ ಪಣಜಿಯ ಮಹಾಲಕ್ಷ್ಮೀ ದೇವಸ್ಥಾನದ ಅಧ್ಯಕ್ಷರಾಗಿ ಶ್ರೀನಿವಾಸ್ ದೆಂಪೊ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ದೇವಸ್ಥಾನಗಳ ಚುನಾವಣೆಯು ಮುಕ್ತ ಮತ್ತು ಶಾಂತತೆಯಿಂದ ಪೂರ್ಣಗೊಳ್ಳಬೇಕು ಎಂಬ ನಿಟ್ಟಿನಲ್ಲಿ ದೇವಸ್ಥಾನ ಪ್ರಶಾಸನ ಸೂಚನೆ ಹೊರಡಿಸಿತ್ತು. ಆದರೆ ಕೆಲವು ದೇವಸ್ಥಾನಗಳಲ್ಲಿ ಚುನಾವಣೆಯನ್ನು ಬಹಿಷ್ಕರಿಸಲಾಯಿತು.