ಸುದ್ಧಿಕನ್ನಡ ವಾರ್ತೆ
Goa: ಗೋವಾದ ಬಿಚೋಲಿಯ ಬೋರ್ಡ ಪರಿಸರದಲ್ಲಿ ಗಾಯಗೊಂಡಿರುವ ಚಿರತೆ ಓಡಾಟ ನಡೆಸುತ್ತಿದೆ ಎಂಬ ಸುದ್ಧಿ ಹರಿದಾಡುತ್ತಿರುವಾಗಲೇ ಇದೀಗ ಕುಳಣ-ಸರ್ವಣ ಪರಿಸರದಲ್ಲಿ ಗಾಯಗೊಂಡಿರುವ ಮತ್ತೊಂದು ಚಿರತೆ ಓಡಾಟ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಶನಿವಾರ ಸಂಜೆ ಈ ಭಾಗದಲ್ಲಿ ರಸ್ತೆಯಲ್ಲಿ ಚಿರತೆ ದರ್ಶನವಾಗಿದೆ. ಈ ಚಿರತೆಗೆ ಬಲ ಭಾಗದ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ.

ಕಳೆದ ಸುಮಾರು 10 ದಿನಗಳ ಹಿಂದೆ ಬೋರ್ಡದಲ್ಲಿ ಕಾರೊಂದು ಡಿಕ್ಕಿಹೊಡೆದು ಚಿರತೆ ಗಾಯಗೊಂಡಿತ್ತು. ಈ ಅಪಘಾತ ನಡೆದ ಸ್ಥಳದಿಂದ ಸುಮಾರು 8 ಕಿ.ಮಿ ದೂರದಲ್ಲಿ ಕುಳಣ-ಸರ್ವಣ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದು ಅದೇ ಗಾಯಗೊಂಡಿರುವ ಚಿರತೆಯೋ…? ಅಥವಾ ಬೇರೆ ಚಿರತೆಯೋ ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.

ಕಳೆದ ಹಲವು ದಿನಗಳಿಂದ ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿದೆ. ವನ್ಯಜೀವಿಗಳು ಜನವಸತಿ ಪ್ರದೇಶಕ್ಕೆ ಬರುವುದನ್ನು ತಡೆಯಲು ಸರ್ಕಾರ ಉಪಾಯಯೋಜನೆ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಘ್ರಹವಾಗಿದೆ.