ಸುದ್ಧಿಕನ್ನಡ ವಾರ್ತೆ
ಪಣಜಿ: ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ಸದನ ಸಮಿತಿಯ ಸಭೆ ಜನವರಿ 10 ರಂದು ನಡೆಯಲಿದೆ. ಮೊದಲಿಗೆ ಈ ಸಭೆಯನ್ನು ಡಿಸೆಂಬರ್ 27 ರಂದು ನಡೆಸಲು ನಿರ್ಧರಿಸಲಾಯಿತು. ಆದರೆ ಕಾರಣಾಂತರಗಳಿಂದ ಜನವರಿ 10 ರಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಇದರಿಂದಾಗಿ ಮಹದಾಯಿ ನದಿ ನೀರು ಹಂಚಿಕೆ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭೆ ಚುನಾವಣೆ ಹಾಗೂ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಮುಖಾಮುಖಿಯಾಗುತ್ತಿವೆ. ಜಲವಿವಾದಗಳ ಮಧ್ಯಸ್ಥಿಕೆ ನೀಡಿದ ಅಂತಿಮ ತೀರ್ಪಿನ ನಂತರ ಕರ್ನಾಟಕ ಮತ್ತು ಮಹಾರಾಷ್ಟ್ರ ಮತ್ತು ಗೋವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
ಈ ನಡುವೆ ಕೆಲ ತಿಂಗಳ ಹಿಂದೆ ಕರ್ನಾಟಕದ ಕಳಸಾ-ಭಂಡೂರ ಯೋಜನೆಗೆ ಕೇಂದ್ರ ಜಲ ಆಯೋಗ ಪರಿಷ್ಕøತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ನೀಡಿದ್ದು, ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಈ ವಿವಾದ ತೀವ್ರಗೊಂಡಿತ್ತು.
ಅಂದು ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರವು ಸದನ ಸಮಿತಿಯನ್ನು ರಚಿಸಿದ್ದು, ಮಹದಾಯಿಗೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನು ಕೈಗೊಳ್ಳಲು ನಿರ್ಧರಿಸಿದೆ. ಇದರಲ್ಲಿ ಎಲ್ಲ ಪಕ್ಷಗಳ ಶಾಸಕರೂ ಇದ್ದಾರೆ. ಕಳೆದ ಹಲವು ತಿಂಗಳಿಂದ ಈ ಸಮಿತಿ ಸಭೆ ನಡೆದಿಲ್ಲ. ಅಂತಿಮವಾಗಿ ಸದನ ಸಮಿತಿ ಸಭೆಯನ್ನು ಜನವರಿ 10 ಕ್ಕೆ ನಿಗದಿಪಡಿಸಲಾಗಿದೆ.