ಸುದ್ಧಿಕನ್ನಡ ವಾರ್ತೆ

ಪಣಜಿ(ಮಾಪ್ಸಾ): ಕವಿಶೈಲ ಕನ್ನಡ ಸಂಘದ ವತಿಯಿಂದ ಕಳೆದ ಸುಮಾರು ೧೨ ವರ್ಷಗಳಿಂದ ಮಾಪ್ಸಾದಲ್ಲಿ ಅದ್ದೂರಿಯಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಹೀಗೆಯೇ ಗೋವಾದಲ್ಲಿ ವಿವಿಧ ಕನ್ನಡ ಸಂಘಟನೆಗಳು ಕೂಡ ಗಣೇಶೋತ್ಸವ ಆಚರಣೆ ಮಾಡುವಂತಾಗಲಿ. ಮಾಪ್ಸಾದಲ್ಲಿಯೂ ಇನ್ನೂ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡಲು ಗೋವಾದ ಎಲ್ಲ ಕನ್ನಡ ಸಂಘಟನೆಗಳೂ ಕೈಜೋಡಿಸಬೇಕು, ನಾವೂ ಕೂಡ ಮುಂಬರುವ ದಿನಗಳಲ್ಲಿ ಈ ಹಿಂದಿನ0ತೆಯೇ ಸಹಾಯ ಸಹಕಾರಕ್ಕೆ ಸಿದ್ಧ ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ನುಡಿದರು.

ಗೋವಾದ ಮಾಪ್ಸಾದಲ್ಲಿ ಕವಿಶೈಲ ಕನ್ನಡ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಕನ್ನಡ ಗಣಪನ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ಮಾಪ್ಸಾದಲ್ಲಿ ಕನ್ನಡ ಗಣಪನ ದರ್ಶನಕ್ಕೆ ಗೋವಾದ ಎಲ್ಲೆಡೆಯಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಇಲ್ಲಿ ಪ್ರತಿದಿನ ಅನ್ನಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಗಣಪನು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಶಕ್ತಿಯನ್ನು ನೀಡಲಿ ಎಂದು ಹನುಮಂತಪ್ಪ ಶಿರೂರ್ ರೆಡ್ಡಿ ನುಡಿದರು.

ಈ ಸಂದರ್ಭದಲ್ಲಿ ಕವಿಶೈಲ ಕನ್ನಡ ಸಂಘದ ವತಿಯಿಂದ ಹನುಮಂತಪ್ಪ ಶಿರೂರ್ ರೆಡ್ಡಿ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಮಾಜಿ ಕೌನ್ಸಿಲರ್ ಭಗವಾನ್ ಹರಮಲ್‌ಕರ್, ಉತ್ತರ ಗೋವಾ ಕಸಾಪ ಜಿಲ್ಲಾಧ್ಯಕ್ಷ ಮಡಿವಾಳಯ್ಯ ಗಣಾಚಾರಿ,ಕರ್ಮಭೂಮಿ ಕನ್ನಡ ಸಂಘದ ಸದಸ್ಯರು ಬಸವರಾಜ ಗೊಡಿಗೇರಿ, ಕನ್ನಡ ಸಾಹಿತ್ಯ ಪರಿಷತ್‌ನ ಬಸವರಾಜ ಅಬ್ಬಿಗೇರಿ, ಅಖಿಲಗೋವಾ ಕನ್ನಡ ಮಹಾಸಂಘದ ಉಪಾಧ್ಯಕ್ಷ ಬಸವಂತಪ್ಪ ತಳವಾರ, ಮತ್ತಿತರರು ಉಪಸ್ಥಿತರಿದ್ದರು. ಕನ್ನಡಿಗ ಮಹಿಳೆಯರಿಂದ ಪುಗಡಿ ನೃತ್ಯ ಕಾರ್ಯಕ್ರಮ ಕೂಡ ಜರುಗಿತು.