ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯ ಕಾಂಗ್ರೇಸ್ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸಭಾಧ್ಯಕ್ಷರ ತೀರ್ಪನ್ನು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಗಿರೀಶ್ ಚೋಡಣಕರ್ ಅವರು ಹಿಂಪಡೆದಿದ್ದಾರೆ. ಎಂಟು ಶಾಸಕರನ್ನು ಅನರ್ಹಗೊಳಿಸಿದ ಅರ್ಜಿಯನ್ನು ಸ್ಪೀಕರ್ ತಿರಸ್ಕರಿಸಿದ ನಂತರ, ಈ ತೀರ್ಪಿನ ವಿರುದ್ಧ ಚೋಡಣಕರ್ ಸುಪ್ರೀಂ ಕೋರ್ಟ್‍ಗೆ ಮೊರೆ ಹೋಗಿದ್ದರು.

 

ಈ ಸಂಬಂಧ ವಿಚಾರಣೆ ವೇಳೆ ಸ್ಪೀಕರ್ ಆದೇಶದ ವಿರುದ್ಧ ಸಂವಿಧಾನದ 136ನೇ ವಿಧಿಯಡಿ ಅರ್ಜಿ ಸಲ್ಲಿಸಲಾಗಿದೆ. ಕಲಂ 136 ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಆಲಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ವಿವರಿಸಿದರು. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕಲಂ 226 ರ ಅಡಿಯಲ್ಲಿ ಹೈಕೋರ್ಟ್‍ಗೆ ಹೋಗುವಂತೆ ಚೋಡಣಕರ್‍ಗೆ ಸೂಚಿಸಿದರು. ಇದಾದ ಬಳಿಕ ಅವರು ಈ ಅರ್ಜಿಯನ್ನು ವಾಪಸ್ ಪಡೆದರು.

 

ಸೆಪ್ಟೆಂಬರ್ 2022 ರಲ್ಲಿ ಎಂಟು ಕಾಂಗ್ರೆಸ್ ಶಾಸಕರಾದ ದಿಗಂಬರ್ ಕಾಮತ್, ಅಲೆಕ್ಸ್ ಸಿಕ್ವೇರಾ, ಸಂಕಲ್ಪ್ ಅಮೋಣರ್, ರುಡಾಲ್ಫ್ ಫನಾರ್ಂಡಿಸ್, ಮೈಕೆಲ್ ಲೋಬೋ, ದಿಲಾಯ್ಲಾ ಲೋಬೋ, ಕೇದಾರ್ ನಾಯ್ಕ್, ರಾಜೇಶ್ ಫಳದೇಸಾಯಿ ಅವರು ಪ್ರತ್ಯೇಕ ಗುಂಪು ರಚಿಸಿ ಬಿಜೆಪಿ ಸೇರಿದರು. ಈ ಎಂಟು ಶಾಸಕರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ಗಿರೀಶ್ ಚೋಡಣಕರ್ ಅವರು ಸ್ಪೀಕರ್‍ಗೆ ಮನವಿ ಸಲ್ಲಿಸಿದ್ದರು. ಸ್ಪೀಕರ್ ರಮೇಶ್ ತವಡ್ಕರ್ ಅವರ ಅರ್ಜಿಯನ್ನು ವಜಾಗೊಳಿಸಿದರು. ಇದಾದ ಬಳಿಕ ನವೆಂಬರ್‍ನಲ್ಲಿ ನೇರವಾಗಿ ಸುಪ್ರೀಂ ಕೋರ್ಟ್‍ಗೆ ಸವಾಲು ಅರ್ಜಿ ಸಲ್ಲಿಸಿದ್ದರು.