ಸುದ್ಧಿಕನ್ನಡ ವಾರ್ತೆ
OLD GOA : ಓಲ್ಡ ಗೋವಾದಲ್ಲಿ ಸಂತ ಫ್ರಾನ್ಸಿಸ್ ಜೇವಿಯರ್ ಅವರ ಶವದರ್ಶನಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಸಿದ್ಧತೆಗೆ ಅನುಗುಣವಾಗಿ ಗೋವಾ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಘಟನಾ ಸಮಿತಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಪರಿಸರ ಸಚಿವ ಅಲೆಕ್ಸ್ ಸಿಕ್ವೇರಾ ಉಪಸ್ಥಿತರಿದ್ದರು. ಇದೇ ವೇಳೆ, ನವೆಂಬರ್ 15 ರೊಳಗೆ ಸಮಾರಂಭದ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಇಲ್ಲಿಯವರೆಗೆ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಗೋವಾ ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು. ಈ ವರ್ಷದ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಭಕ್ತರಿಗಾಗಿ ಕದಂಬ ಸಾರಿಗೆ ಮತ್ತು ರೈಲುಗಳ ವ್ಯವಸ್ಥೆ ಮಾಡಲಾಗುವುದು ಮತ್ತು ಮುಂದಿನ 8 ದಿನಗಳಲ್ಲಿ ರಸ್ತೆ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದರು. ಒಟ್ಟಾರೆ ನಡೆಯುತ್ತಿರುವ ಕಾಮಗಾರಿಯ ವೇಗ ತೃಪ್ತಿಕರವಾಗಿದೆ ಎಂದು ಹೇಳಿದರು. ಈ ಬಾರಿ 200 ಜನರಿಗೆ ವಿಐಪಿ ಪಾಸ್ ನೀಡಲಾಗುವುದು. ನವೆಂಬರ್ 21 ರಿಂದ ಜನವರಿ 5 ರವರೆಗೆ ಸಂತ ಫ್ರಾನ್ಸಿಸ್ ಜೇವಿಯರ್ ಅವರ 17 ನೇ ಎಕ್ಸೂಮೇಷನ್ ನಡೆಯಲಿದೆ ಎಂದು ಸಿಎಂ ಸಾವಂತ್ ಮಾಹಿತಿ ನೀಡಿದರು.
ಈ ಮಧ್ಯೆ, ಉತ್ತರ ಗೋವಾ ಜಿಲ್ಲಾಧಿಕಾರಿ ಮತ್ತು ಸಾರಿಗೆ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿಗಳು ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಚರ್ಚ್ ಆವರಣದಲ್ಲಿ 2000 ವಾಹನಗಳಿಗೆ ಪಾಕಿರ್ಂಗ್ ವ್ಯವಸ್ಥೆ ಮಾಡಲಾಗುವುದು. ಇಲ್ಲಿ ಫುಟ್ ಪಾತ್ ಮತ್ತು ಭೂಗತ ವಿದ್ಯುತ್ ಮಾರ್ಗಗಳ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೆ, ಸಮಾರಂಭದಲ್ಲಿ ಸುಗಮ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು 200 ಎಂವಿಎಚ್ ಟ್ರಾನ್ಸ್‍ಫಾರ್ಮರ್ ಅನ್ನು ಸಹ ಅಳವಡಿಸಲಾಗಿದೆ. ಇಲ್ಲಿ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಮಾರಂಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಸಿಎಂ ಸಾವಂತ್ ಮಾಹಿತಿ ನೀಡಿದರು.