ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ವಾಸ್ಕೊ ಸಂಕ್ವಾಳನಲ್ಲಿ ನಡೆಯುತ್ತಿರುವ ಭೂತಾನಿ ಮೆಗಾ ಯೋಜನೆ ರದ್ದುಪಡಿಸಬೇಕು ಹಾಗೂ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಾಜಿ ಪಂಚಾಯತ ಅಧ್ಯಕ್ಷ ಪ್ರೇಮಾನಂದ ನಾಯ್ಕ್ ಅವರ ಮೇಲೆ ಅನಗತ್ಯ ಆರೋಪ ಮಾಡುವ ಮೂಲಕ ಮಾನಹಾನಿ ಮಾಡಬಾರದು ಎಂದು ಒತ್ತಾಯಿಸಿ ನೂರಾರು ಗ್ರಾಮಸ್ಥರು ಭಾನುವಾರ ಪಂಚಾಯಿತಿ ಎದುರು ಜಮಾಯಿಸಿದರು. ಸಂಕ್ವಾಳ ವರ್ಸಸ್ ಭೂತಾನಿ ಮೆಗಾ ಪ್ರಾಜೆಕ್ಟ್ ಎಂಬ ಬ್ಯಾನರ್ ಅಡಿಯಲ್ಲಿ ಗ್ರಾಮಸ್ಥರು ಜಮಾಯಿಸಿ ಯೋಜನೆಗೆ ನೀಡಿರುವ ನಿರ್ಮಾಣ ಪರವಾನಗಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.

ಪಂಚಾಯತ ಮಾಜಿ ಅಧ್ಯಕ್ಷ ಪ್ರೇಮಾನಂದ ನಾಯ್ಕ್ ಅವರನ್ನು ಬೆಂಬಲಿಸಲು ರಾಜಕೀಯ ಮುಖಂಡರು ಮತ್ತು ಸ್ಥಳೀಯ ಜನರು ಸಾಂಕ್ವಾಳನಲ್ಲಿ ಜಮಾಯಿಸಿದ್ದರು. ಪ್ರೇಮಾನಂದ ನಾಯ್ಕ ಅವರು ಆರಂಭಿಸಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಿನ್ನೆ ಏಳನೇ ದಿನವಾಗಿತ್ತು. ಮೆಗಾ ಪ್ರಾಜೆಕ್ಟ್ ವಿರುದ್ಧ ಸಾಂಕ್ವಾಳ ಗುಂಪಿನ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಲಾಯಿತು, ಇದರಲ್ಲಿ ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕುಠ್ಠಾಳಿ ಶಾಸಕ ಅಂತೋನಿ ವಾಜ್ ಅವರು ಭೂತನಿ ಯೋಜನೆ ವಿರುದ್ಧ ತಮ್ಮ ನಿಲುವನ್ನು ಒತ್ತಿಹೇಳುತ್ತಾ, ವಿಧಾನಸಭೆ ಹಾಗೂ ಪಂಚಾಯತ್ ಮತ್ತು ಇತರ ಸಂಬಂಧಪಟ್ಟ ಇಲಾಖೆಗಳೊಂದಿಗೆ ಪತ್ರವ್ಯವಹಾರದ ಮೂಲಕ ಯೋಜನೆಯನ್ನು ವಿರೋಧಿಸಿದರು. ಸಂಕ್ವಾಳ ಪಂಚ ತುಳಸಿದಾಸ್ ನಾಯಕ್, ಆಪ್ ಶಾಸಕ ಕ್ರಿಸ್ ಸಿಲ್ವಾ, ಮಾಜಿ ಪ್ರವಾಸೋದ್ಯಮ ಸಚಿವ ಮಿಕ್ಕಿ ಪಾಚೆಕೊ, ಗೋವಾ ಫಾರ್ವರ್ಡ್‍ನ ಮೋಹನ್‍ದಾಸ್ ಲೋಲಾಯೇಕರ್, ಪ್ರತಿಮಾ ಕುಟಿನ್ಹೋ ಪ್ರತಿಭಟನೆಯನ್ನು ಬೆಂಬಲಿಸಿದರು.