ಪಣಜಿ: ಗೋವಾ ರಾಜ್ಯದಲ್ಲಿ ಗಣಿಗಾರಿಕೆ ಆರಂಭವಾದ ಬಳಿಕ ಗಣಿ ಇಲಾಖೆಯ ವ್ಯಾಪ್ತಿ ಹೆಚ್ಚಲಿದ್ದು, ಈ ಹಿನ್ನೆಲೆಯಲ್ಲಿ ಗಣಿ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿಯನ್ನು ಗುತ್ತಿಗೆ ಆಧಾರದ ಮೇಲೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು. ರಾಜ್ಯ ಸಚಿವ ಸಂಪುಟ ಸಭೆಯ ನಂತರ ಪ್ರಮೋದ್ ಸಾವಂತ್ ಸುದ್ದಿಗಾರರಿಗೆ ತಿಳಿಸಿದರು. ಇದಲ್ಲದೇ ಮುಚ್ಚಿಹೋಗಿರುವ ಮೈನಿಂಗ್ ಡಿಗ್ರಿ ಇಂಜಿನಿಯರಿಂಗ್ ಕೋರ್ಸ್ ಅನ್ನು ಹೊಸದಾಗಿ ಆರಂಭಿಸಲಾಗುತ್ತಿದ್ದು, ಈವರೆಗೆ 20 ಆಸಕ್ತ ವಿದ್ಯಾರ್ಥಿಗಳು ಇದಕ್ಕಾಗಿ ಸಂಪರ್ಕಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಇದೀಗ ರಾಜ್ಯದಲ್ಲಿ ಕೆಲವು ಗಣಿಗಾರಿಕೆ ನಿವೇಶನಗಳು ಹರಾಜಾಗಿದ್ದು, ಗಣಿ ಇಲಾಖೆಯ ವ್ಯಾಪ್ತಿ ಹೆಚ್ಚಾಗಲಿದೆ. ಹಾಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಅಲ್ಲದೆ, ಕನಿಷ್ಠ 20 ತೀವ್ರ ಅಸ್ವಸ್ಥ ರೋಗಿಗಳನ್ನು ನೋಡಿಕೊಳ್ಳುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ (ಎನ್‍ಜಿಒ) 2.5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ರಾಜ್ಯದಲ್ಲಿ ಕ್ಯಾನ್ಸರ್, ಬ್ರೈನ್ ಸ್ಟ್ರೋಕ್, ಬುದ್ಧಿಮಾಂದ್ಯತೆ ಹಾಗೂ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಶ್ರಯ ಮತ್ತು ಆರೈಕೆ ನೀಡುವ ಎನ್‍ಜಿಒಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ. ಅದರಂತೆ ಈಗ ಅವರಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಗೋಮಾಂತಕಿಯರು ಕಳೆದ ವರ್ಷದಂತೆ ಚತುರ್ಥಿಗೆ ಸ್ವಯಂಪೂರ್ಣ ಗೋವಾ ಅಡಿಯಲ್ಲಿ ಆನ್‍ಲೈನ್ ಶಾಪಿಂಗ್ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದರು. ಗೋವಾ ಸರ್ಕಾರದ ವೆಬ್‍ಸೈಟ್ ‘ಗೋವಾ ಬಜಾರ್.ಕಾಮ್’ ನಿಂದ ಮಾಟೋಲಿಗಾಗಿ 14 ರೀತಿಯ ವಸ್ತುಗಳನ್ನು ಆರ್ಡರ್ ಮಾಡಬಹುದು. ಇದಕ್ಕಾಗಿ ಜೀವವೈವಿಧ್ಯ ಮಂಡಳಿಯ ಸಹಕಾರವನ್ನು ತೆಗೆದುಕೊಳ್ಳಲಾಗುವುದು. ಮಹಿಳಾ ಸ್ವಯಂಸೇವಾ ಸಂಸ್ಥೆಗಳು ಸಿದ್ಧಪಡಿಸಿದ ಕಾರಂಜ, ಲಾಡು ಮತ್ತಿತರ ಸಾಮಗ್ರಿಗಳೂ ಲಭ್ಯವಿರುತ್ತವೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.