ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾದಲ್ಲಿ ಕೃಷಿ ಭೂಮಿ ರೂಪಾಂತರ ಗದ್ದಲ ಮತ್ತೆ ಆರಂಭಗೊಂಡಿದ್ದು, ಕಾಂಗ್ರೇಸ್ ಹೋರಾಟ ಆರಂಭಿಸಿದೆ. ಕೃಷಿ ಜಮೀನು ರೂಪಾಂತರ ಗೊಳಿಸಿ ಅದೇ ಜಮೀನನ್ನು ಖರೀದಿ ಮಾಡಿರುವ ಪ್ರಕರಣದಲ್ಲಿ ಸಚಿವರನ್ನು ಘೇರಾವ್ ಹಾಕಲು ಕಾಂಗ್ರೇಸ್ ನಾಯಕರು, ಕಾರ್ಯಕರ್ತರು ಗೋವಾ ವಿಧಾನಸಭೆಯ ಪ್ರವೇಶದ್ವಾರದಲ್ಲಿ ಆಕ್ರಮಣಕಾರಿಯಾಗಿ ಪ್ರತಿಭಟನೆ ನಡೆಸಿದರು. ವಿಧಾನಸಭೆಯ ಪ್ರವೇಶದ್ವಾರದಲ್ಲಿ ಪ್ರತಿಭಟನಾ ನಿರತರನ್ನು ಪೋಲಿಸರು ತಡೆದಿದ್ದರಿಂದ ಪೋಲಿಸ್ ಮತ್ತು ಕಾಂಗ್ರೇಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಕೃಷಿ ಜಮೀನು ರೂಪಾಂತರಗೊಳಿಸಿ ಅದೇ ಜಮೀನನ್ನು ಖರೀದಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯ ಸಚಿವ ಪುನಿತ್ ಕುಮಾರ್ ಗೋಯಲ್ ತೊಂದರೆಗೆ ಸಿಲುಕಿದ್ದಾರೆ. ಕಾಂಗ್ರೇಸ್ ಪಕ್ಷವು ಈ ಪ್ರಕರಣದಲ್ಲಿ ಆಕ್ರಮಣಕಾರಿಯಾಗಿ ಹೋರಾಟಕ್ಕಿಳಿದಿದೆ.

ಮುಖ್ಯ ಸಚಿವರನ್ನು ಘೇರಾವ್ ಹಾಕಲು ಕಾಗ್ರೇಸ್ ನಾಯಕರು ಗೋವಾ ವಿಧಾನಸಭೆ ಪ್ರವೇಶದ್ವಾರದ ಬಳಿ ದಾಖಲಾಗುವಷ್ಟರಲ್ಲಿ ಪೋಲಿಸ್ ಬೃಹತ್ ತುಕಡಿಯನ್ನು ಅಲ್ಲಿ ನಿಯೋಜಿಸಲಾಗಿತ್ತು. ಪೋಲಿಸರು ಕಾಂಗ್ರೇಸ್ ಪ್ರತಿಭಟನಾಕಾರರನ್ನು ತಡೆದು ನಿಲ್ಲಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಪ್ರದೇಶಾಧ್ಯಕ್ಷ ಅಮಿತ್ ಪಾಟಕರ್, ಸೋಶಿಯಲ್ ಮೀಡಿಯಾ ಸೆಲ್ ಪ್ರಮುಖ ಅಮರನಾಥ ಪಣಜೀಕರ್, ಶಾಸಕ ಕಾರ್ಲುಸ್ ಅಲ್ಮೇದಾ, ಸುನೀಲ ಕವಠಣಕರ್ ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಪ್ರದೇಶಾಧ್ಯಕ್ಷ ಅಮಿತ್ ಪಾಟಕರ್ ಮಾತನಾಡಿ- ಗೋವಾ ರಾಜ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಕೃಷಿ ಜಮೀನು ರೂಪಾಂತರ ನಡೆಯುತ್ತಿದೆ. ರಾಜ್ಯ ಸರ್ಕಾರ ಮಾತ್ರ ಶಾಂತವಾಗಿ ಕುಳಿತಿದ್ದು, ಈ ಕುರಿತು ಯಾವುದೇ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ಮತ್ತೊಂದೆಡೆ ಸಚಿವ ವಿಶ್ವಜಿತ್ ರಾಣೆ ಪತ್ರಿಕಾಗೋಷ್ಠಿ ನಡೆಸಿ ಸಚಿವ ಪುನಿತ್ ಕುಮಾರ್ ಗೋಯಲ್ ರವರಿಗೆ ಕ್ಲೀನ್‍ಚಿಟ್ ನೀಡಿದ್ದಾರೆ. ಗೋಯಲ್ ರವರ ಹೆಸರನ್ನು ವಿನಾಕಾರಣ ಹಾಳುಮಾಡಲಾಗುತ್ತಿದೆ, ರಾಜ್ಯ ಸರ್ಕಾರದ ಪರವಾನಗಿಯಿಂದಲೇ ಅವರು ಜಮೀನು ಖರೀದಿಸಿದ್ದಾರೆ ಎಂದು ವಿಶ್ವಜಿತ ರಾಣೆ ಸ್ಪಷ್ಟಪಡಿಸಿದರು.