ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ನವರಾತ್ರಿ ಮತ್ತು ದಸರಾ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ಆದರೆ ಎಲ್ಲಡೆಯಂತೆಯೇ ಗೋವಾದಲ್ಲಿ ದುರ್ಗೆಯನ್ನು ಪ್ರತಿಷ್ಠಾಪಿಸಿ 9 ದಿನಗಳ ಕಾಲ ಪೂಜಿಸುವ ಪದ್ದತಿಯಿದೆ.
ದುರ್ಗಾದೇವಿಯು ರಾಕ್ಷಸ ಮಹಿಷಾಸುರನನ್ನು ಕೊಂದ ವಿಜಯದ ಯುದ್ಧದ ನಂತರ ದುರ್ಗಾ ದೇವಿಯು ತುಂಬಾ ಶಾಂತಿಯತಳಾದಳು ಮತ್ತು ಗೋವಾಕ್ಕೆ ಬಂದು ನೆಲೆಸಿದಳು. ಗೋವಾದಲ್ಲಿ ದುರ್ಗಾದೇವಿಗೆ ಶಾಂತಾದುರ್ಗಾ ಎಂಬ ಹೆಸರು ಬಂತು ಎಂದು ಗೋವಾ ರಾಜ್ಯದ ಜನರ ನಂಬಿಕೆಯಾಗಿದೆ. ಗೋವಾದ ಪೊಂಡಾದಲ್ಲಿ ಶಾಂತಾದುರ್ಗಾ ದೇವಾಲಯಲ್ಲಿ ಈ ದೇವಿ ಅವತರಿಸಿದ್ದಾಳೆ ಎಂಬ ನಂಬಿಕೆಯಿದೆ.
ಗೋವಾದಲ್ಲಿ ದಸರಾ ಹಬ್ಬದಂದು ಶಕ್ತಿ ದೇವತೆಯೊಂದಿಗೆ ಶಿವನ ವಿವಾಹವಾಗಿದೆ. ಗೋವಾದಲ್ಲಿ ಈ ಹಬ್ಬವನ್ನು ಶಕ್ತಿ ದೇವಿಯೊಂದಿಗೆ ಶಿವನ ವಿವಾಹವಾಗಿಯೂ ಆಚರಿಸಲಾಗುತ್ತದೆ. ಗೋವಾದಲ್ಲಿ ಶಿವನ ಪತ್ನಿಯಾದ ಪಾರ್ವತಿಯನ್ನು ಮೌಲಿ ಸಾತೇರಿ, ಶಾಂತಾದುರ್ಗಾ, ಭೂಮಿಕಾ, ಹೀಗೆ ವಿವಿಧ ರೂಪಗಳಲ್ಲಿ ದುರ್ಗಾ ಮಾತೆಯನ್ನು ಪೂಜಿಸಲಾಗುತ್ತದೆ. ಗೋವಾದಲ್ಲಿ ಹೀಗೆ ವಿವಿಧ ರೂಪಗಳಲ್ಲಿ ದುರ್ಗೆ ಎಲ್ಲೆಲಲ್ಲಿ ನೆಲೆಸಿದ್ದಾಳೊ ಅಲ್ಲಿ ಹಬ್ಬಗಳು ಆ ರೂಪಗಳನ್ನು ಪಡೆದುಕೊಳ್ಳುತ್ತದೆ.
ನವರಾತ್ರಿ ಸಂದರ್ಭದಲ್ಲಿ ಗೋವಾದಲ್ಲಿ ಪಾಕಪದ್ಧತಿ ಕೂಡ ವಿಭಿನ್ನವಾಗಿದೆ. ಗೋವಾದ ಪಾಕ ಪದ್ಧತಿ ಪಶ್ಚಿಮ ಬಂಗಾಳ ಮತ್ತು ಗುಜರಾಥ್ ನಲ್ಲಿರುವಂತೆ ಅಲ್ಲ. ಪ್ರತಿಯೊಂದೂ ರಾಜ್ಯ ತನ್ನದೇ ಆದ ಅಭಿರುಚಿ ಮತ್ತು ಪಾಕಪದ್ಧತಿಯನ್ನು ಹೊಂದಿದೆ. ಕಲ್ಕತ್ತಾದಲ್ಲಿ ದಸರಾ ಸಂದರ್ಭದಲ್ಲಿ ರಸಗೊಲ್ಲಾ ಜನಪ್ರೀಯವಾಗಿದೆ. ಗುಜರಾಥನಲ್ಲಿ ಧೋಕ್ಲಾ, ಗೋವಾದಲ್ಲಿ ಪುರಾಣ್ ಪೋಳಿ (ಹೋಳಿಗೆ ) ಮತ್ತು ಶ್ರೀಖಂಡ ನೈವೇದ್ಯ ಪ್ರಮುಖವಾಗಿದೆ. ಗೋವಾದಲ್ಲಿ ದಸರಾ ಹಬ್ಬವನ್ನು “ದಸ್ರೊ” ಎಂದು ಕರೆಯುತ್ತಾರೆ.
ಗೋವಾದಲ್ಲಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ 9 ದಿನಗಳ ಕಾಲ ಅದರಲ್ಲೂ ಪ್ರಮುಖರಾಗಿ ಸಂಜೆ ಭಜನೆ. ದಾಂಡಿಯಾ ನೃತ್ಯ ಕೂಡ ಪ್ರಮುಖ ಪದ್ಧತಿಗಳಲ್ಲಿ ಒಂದಾಗಿದೆ. ಗೋವಾದ ಹಲವು ದೇವಿಯ ದೇವಸ್ಥಾನಗಳಲ್ಲಿ ಮಕರೋತ್ಸವ ಆಚರಣೆ ಕೂಡ ವಿಶೇಷವಾಗಿದೆ. ಮಕರೋತ್ಸವ ಎಂದರೆ ನವರಾತ್ರಿಯಲ್ಲಿ ದೇವಿಯನ್ನು ಉಯ್ಯಾಲೆಯಂತಹ ತೊಟ್ಟಿಲಲ್ಲಿ ಪ್ರತಿಷ್ಠಾಪಿಸಿ ಪ್ರತಿದಿನ ಸಂಜೆ ಆರತಿ ಮಾಡುವ ಸಂದರ್ಭದಲ್ಲಿ ಉಯ್ಯಾಲೆ ತೂಗುವುದಕ್ಕೆ ಮಕರೋತ್ಸವ ಎನ್ನುತ್ತಾರೆ. ಗೋವಾದಲ್ಲಿ ದಸರಾ ಹಬ್ಬದಂದೇ ಪ್ರತಿಯೊಬ್ಬರೂ ತಮ್ಮ ವಾಹನಗಳ ಪೂಜೆ ನೆರವೇರಿಸುತ್ತಾರೆ.
ಗೋವಾ ರಾಜ್ಯ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದ್ದರು ಹಬ್ಬಗಳ ಆಚರಣೆಯನ್ನು ಕೂಡ ಅಷ್ಟೇ ಶೃದ್ಧಾ ಭಕ್ತಿಯಿಂದ ಮಾಡಲಾಗುತ್ತದೆ. ಗೋವಾದಲ್ಲಿ ಅಲ್ಲಲ್ಲಿ ಸ್ಥಾನಿಕವಾಗಿ ನವರಾತ್ರಿಯು ಇನ್ನೂ ಕೆಲ ವೈಶಿಷ್ಠ್ಯತೆಗಳನ್ನು ಒಳಗೊಂಡಿದೆ.