ಪಣಜಿ: ಗೋವಾದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಗೋವಾ ತುಳು ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿ ಹೋಟೆಲ್ ಉದ್ಯಮಿ ಕಾರ್ಕಳ ಇರ್ವತ್ತೂರಿನ ಗಣೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಗೋವಾದಲ್ಲಿ 2000 ಕ್ಕೂ ಹೆಚ್ಚು ಜನ ತುಳುವರು ವಿವಿಧ ಉದ್ಯಮ ಉದ್ಯೋಗದಲ್ಲಿ ತೊಡಗಿದ್ದು ಅವರನ್ನೆಲ್ಲ ಒಟ್ಟು ಸೇರಿಸವ ನಿಟ್ಟಿನಲ್ಲಿ ತುಳು ಕೂಟ ರಚನೆಯಾಗಿದೆ. ಗೋವಾ ರಾಜಧಾನಿ ಪಣಜಿಯಲ್ಲಿ ಅಗಷ್ಟ 27 ರಂದು ನಡೆದ ಸಭೆಯಲ್ಲಿ ಗಣೇಶ್ ಶೆಟ್ಟಿ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಗಣೇಶ ಶೆಟ್ಡಿ ರವರು ಕಾರ್ಕಳ ಹಾಗೂ ಗೋವಾದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಪಟ್ಲ ಫೌಂಡೇಶನ್ ಗೋವಾದ ಅಧ್ಯಕ್ಷರಾಗಿರುವ ಇವರು ಗೋವಾ ಬಂಟ್ಸ ಸಂಘದ ಮಾಜಿ ಕಾರ್ಯದರ್ಶಿಯಾಗಿ, ಇರ್ವತ್ತೂರು ಶಾಲಾ ಶತಮಾನೋತ್ಸವ ಸಮೀತಿ ಮುಂಬಯಿ ಕಾರ್ಯದರ್ಶಿಯಾಗಿ ಸಾಣೂರು ಗರಡಿ ಜೀರ್ಣೋದ್ದಾರ ಸಮೀತಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುರತ್ತಂಗಡಿ ಭಕ್ತವತ್ಸಲ ಸಮೀತಿಯ ಅಧ್ಯಕ್ಷರಾಗಿ ಕಳೆದ 27 ವರ್ಷಗಳಿಂದ ಸಮೀತಿಯನ್ನು ನಡೆಸಿಕೊಂಡು ಬಂದಿರುವ ಇವರು ಪ್ರತಿವರ್ಷ ಸಾಧಕರಿಗೆ ಸನ್ಮಾನ, ಶಾಲಾ ಮಕ್ಕಳಿಗೆ ಶೈಕ್ಷಣಿಕ ನೆರವು, ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಮತ್ತಿತರ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಗೋವಾ ತುಳು ಕೂಟಕ್ಕೆ ಗೌರವ ಅಧ್ಯಕ್ಷರಾಗಿ ಚಂದ್ರಹಾಸ ಅಮಿನ್ ಬಂಟ್ವಾಳ, ಉಪಾಧ್ಯಕ್ಷರಾಗಿ ಶಶಿಧರ ರೈ ಪುತ್ತೂರು, ಪ್ರಕಾಶ ಪೂಜಾರಿ ಮಡಿಕೇರಿ, ವಿಜಯ್ ಶೆಟ್ಟಿ ನಿಟ್ಟೆ, ನಾಗೇಶ ಪೂಜಾರಿ ಪಣಿಯೂರು, ಕಾರ್ಯದರ್ಶಿಯಾಗಿ ಶಶಿಧರ ನಾಯ್ಕ ಬೋಂದೆಲ್, ಕೋಶಾಧಿಕಾರಿಯಾಗಿ ಸಿಎ ಪ್ರಶಾಂತ ಜೈನ್ ಇರ್ವತ್ತೂರು, ಸಹಕಾರ್ಯದರ್ಶಿಯಾಗಿ ಶ್ರೀಕಾಂತ ಅಮಿನ್, ಸಹ ಕೋಶಾಧಿಕಾರಿಯಾಗಿ ಅಪ್ಪಾಜಿ ಶೆಟ್ಟಿ ಆಯ್ಕೆಯಾಗಿದ್ದಾರೆ.