ಪಣಜಿ: ಅತ್ಯುತ್ತಮ ಕಲಾಕಾರರು ಸಿದ್ಧರಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ರವೀಂದ್ರ ಭವನ ನಿರ್ಮಾಣ ಕೊಂಚ ವಿಳಂಭವಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಕಾಣಕೋಣ ರವೀಂದ್ರ ಭವನವು ಮಡಗಾಂವ ರವೀಂದ್ರ ಭವನಕ್ಕಿಂತ ಒಂದು ಹೆಜ್ಜೆ ಮುಂದಿದೆ, ಸಾಖಳಿ ರವೀಂದ್ರ ಭವನಕ್ಕಿಂತ ಎರಡು ಹೆಜ್ಜೆ ಮುಂದಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ದಕ್ಷಿಣ ಗೋವಾದ ಕಾಣಕೋಣದಲ್ಲಿ ಗೋವಾ ರಾಜ್ಯ ಸರ್ಕಾರವು ನೂತನವಾಗಿ ನಿರ್ಮಿಸಿದ ರವೀಂದ್ರ ಭವನವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಉಧ್ಘಾಟಿಸಿದರು. ಈ ರವೀಂದ್ರ ಭವನಕ್ಕೆ ದಿ. ಲತಾ ಮಂಗೇಶಕರ್ ರವರ ಹೆಸರಿಡಲಾಗಿದ್ದು, ಸಭಾಗೃಹಕ್ಕೆ ಮಂತ್ರಿ ಸಂಜಯ ಬಾಂದೋಡಕರ್ ರವರ ಹೆಸರಿಡಲಾಗಿದೆ. ಈ ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡುತ್ತಿದ್ದರು.
ಈ ರವೀಂದ್ರ ಭವನ ನಿರ್ಮಾಣಕ್ಕೆ 55 ಕೋಟಿ ರೂ ಖರ್ಚಾಗಿದೆ. ಈ ಕಲಾ ಭವನವು ಕೇವಲ ತ್ರಿಯಾತ್ರ ಮತ್ತು ನಾಟಕಕ್ಕಾಗಿ ಮಾತ್ರ ಸೀಮಿತವಾಗಿರಬಾರದು, ಈ ಕಲಾ ಭವನವು ಹೊಸ ಹೊಸ ಕಲಾವಿದರನ್ನು ಹುಟ್ಟುಹಾಕುವ ಕೇಂದ್ರವಾಗಬೇಕು. ಚಿಕ್ಕ ಮಕ್ಕಳಿಗೂ ಇದು ಇದು ಉಪಯೋಗವಾಗಬೇಕು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು. ಈ ಸಂದರ್ಭದಲ್ಲಿ ಸಭಾಪತಿ ರಮೇಶ ತವಡಕರ್ ಮತ್ತಿತರರು ಉಪಸ್ಥಿತರಿದ್ದರು.