ಪಣಜಿ: ಕನ್ನಡ ಶಾಲೆಗಳು ಉಳಿಯಬೇಕು, ಕನ್ನಡ ಶಾಲೆಗಳು ಬೆಳೆಯಬೇಕು ಎಂಬ ಅಭಿಯಾನದ ಅಡಿಯಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ನಡೆಸಿದ್ದ ಕಾರ್ಯಕ್ರಮದ ಒಂದು ಭಾಗವಾಗಿ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಲಕರಣೆ ವಿತರಣೆ ಮಾಡಲಾಗಿದೆ. ಗೋವಾದಲ್ಲಿ ಗೋವಾ ಬಿಜೆಪಿ ಕರ್ನಾಟಕ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ ರವರ ನೇತೃತ್ವದಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿಯೂ ಈ ನಿಟ್ಟಿನಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ನುಡಿದರು.

ಗೋವಾ ವಾಸ್ಕೊ ಜುವಾರಿನಗರ ಝರಿಯ ಶ್ರೀ ಯಲ್ಲಾಲಿಂಗೇಶ್ವರ ಕನ್ನಡ ಶಾಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಗೋವಾ ಬಿಜೆಪಿ ಕರ್ನಾಟಕ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ ,ಉದ್ಯಮಿ ನವೀನ್ ಶೆಟ್ಟಿ, ವಿಜಯ್ ಶೆಟ್ಟಿ ರವರು ನೀಡಿದ್ದ ಸ್ಕೂಲ್ ಬ್ಯಾಗ್ ಮತ್ತು ಪಠ್ಯಪುಸ್ತಕಗಳನ್ನು ಜುವಾರಿನಗರ ಕನ್ನಡ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಚಂದ್ರಶೇಖರ್ ಬಿಂಗಿ, ಮಾರುತಿ ಹಾದಿಮನಿ, ಸಂಗಮೇಶ ನಾಗೋಡ, ಸೇರಿದಂತೆ ಕನ್ನಡ ಸಂಘದ ಸದಸ್ಯರು ಸೇರಿ ವಿದ್ಯಾರ್ಥಿಗಳಿಗೆ ಪುಸ್ತಕ,ಬ್ಯಾಗ್ ಮತ್ತು ಕಂಪಾಸ್ ವಿತರಿಸಿದರು.
ಶ್ರೀ ಯಲ್ಲಾಲಿಂಗೇಶ್ವರ ಶಾಲೆಯ ಮುಖ್ಯ ಶಿಕ್ಷಕರಾದ ಸುಜಾತಾ ಮನ್ನೀಕೇರಿ ಉಪಸ್ಥಿತರಿದ್ದು ಮಾತನಾಡಿ-ಕನ್ನಡ ಶಾಲೆಯ ಬಗ್ಗೆ ಕಾಳಜಿ ತೋರಿಸಿ ಕನ್ನಡಿಗರ ಅಭಿವೃದ್ಧಿಗೆ ಶೃಮಿಸುತ್ತಿರುವ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.