ಸುದ್ಧಿಕನ್ನಡ ವಾರ್ತೆ

Goa: ಗೋವಾದ ಮಾಪ್ಸಾದ ಚಂದ್ರಮೋಹನ್ ನಾಸ್ನೋಡಕರ್ ರವರ ಮಾಲೀಕತ್ವದ ನಾಸ್ನೋಡರ್ ಜುವೆಲರ್ಸ ಅಂಗಡಿಯ ಕಿಡಕಿಯ ಒಡೆದು ಕೋಟ್ಯಂತರ ರೂಪಾಯಿ ಮೌಲ್ಯದ ಬೆಳ್ಳಿ-ಬಂಗಾರ ಆಭರಣವನ್ನು ಕಳ್ಳತನ ಮಾಡಿದ್ದ ಧರೋಡೆಕೋರರನ್ನು ಬಂಧಿಸಲು ಗೋವಾ ಪೋಲಿಸರು ಬಲೆ ಬೀಸಿದ್ದಾರೆ.

ಪೋಲಿಸರಿಗೆ ಕೆಲ ಪುರಾವೆಗಳು ಲಭಿಸಿದ್ದು ಧರೋಡೆಕೋರರ ಬಂಧನಕ್ಕಾಗಿ ಪೋಲಿಸರ ತಂಡ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ತೆರಳಿದೆ.
ಜುವೆಲರ್ಸ ಧರೋಡೆ ನಡೆಸಿದ ನಂತರ ಧರೋಡೆಕೋರರು ಕಾಲ್ನಡಿಗೆಯಲ್ಲಿ ಮಾಪ್ಸಾದ ಮಹಾರುದ್ರ ದೇವಸ್ಥಾನದ ವರೆಗೆ ಬಂದಿದ್ದಾರೆ, ಇದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೋಲಿಸರು ಧರೋಡೆಕೋರರ ಗುರುತು ಪತ್ತೆಹಚ್ಚಿದ್ದಾರೆ. ಈಗಾಗಲೇ ಪೋಲಿಸರು ಧರೋಡೆಕೋರರಿಗಾಗಿ ಮಾಪ್ಸಾದ ಎಲ್ಲ ಹೋಟೆಲ್ ಮತ್ತು ಲಾಡ್ಜಗಳನ್ನು ಶೋಧಿಸಿದ್ದು, ಪತ್ತೆಯಾಗಿಲ್ಲ ಎನ್ನಲಾಗಿದೆ.

ಧರೋಡೆಕೋರರು ಜುವೆಲರ್ಸನ ಎದುರಿನ ವಿದ್ಯುತ್ ಕಂಬ ದಿಂದ ಅಂಗಡಟಿಯ ಮೇಲೆ ಹತ್ತಿ, ಮೇಲ್ಭಾವಣಿಯ ಬಳಿಯ ಕಿಡಕಿಯ ಕಬ್ಬಿಣದ ರಾಡ್ ಮುರಿದು ಅಂಗಡಿಯ ಒಳ ಪ್ರವೇಶಿಸಿದ್ದಾರೆ. ಧರೋಡೆಕೋರರು ಎರಡು ಚೀಲದಲ್ಲಿ ಬೆಳ್ಳಿ ಬಂಗಾರವನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ, ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಧರೋಡೆಕೋರರು ಮಾಪ್ಸಾದ ಯಾವ ಭಾಗದಿಂದ ಪರಾರಿಯಾಗಿದ್ದಾರೆ ಮತ್ತು ಎಲ್ಲಿಗೆ ತೆರಳಿದ್ದಾರೆ ಎಂಬುದನ್ನು ವಿವಿಧ ಭಾಗದಲ್ಲಿರುವ ಸಿಸಿಟಿವಿ ಕ್ಯಾಮರಾ ಮೂಲಕ ಪೋಲಿಸರು ಶೋಧ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ರಾತ್ರಿ 12 ರಿಂದ 2 ಗಂಟೆಯ ವರೆಗೆ ಧರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಈ ಕೃತ್ಯವು ಬೆಳಿಗ್ಗೆ 10 ಗಂಟೆಗೆ ಮಾಲೀಕರು ಅಂಗಡಿ ತೆರೆಯಲು ಬಂದಾಗ ಬೆಳಕಿಗೆ ಬಂದಿದೆ. ಅಷ್ಟು ಹೊತ್ತಿಗಾಗಲೇ ಧರೋಡೆಕೋರರು ನೆರೆಯ ರಾಜ್ಯಗಳಿಗೆ ಪರಾರಿಯಾಗಿರ ಬಹುದು ಎಂದು ಶಂಕಿಸಲಾಗುತ್ತಿದೆ. ಪೋಲಿಸರು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಧರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.