ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಸಮುದ್ರದ ನಡುಗಡ್ಡೆಯಲ್ಲಿ ನಡೆಯುವ ಅಪರೂಪದ ಜಾತ್ರೆ
ಎಂದೇ ಖ್ಯಾತಿಯಾಗಿರುವ ಕೂರ್ಮಗಡ ದ್ವೀಪ ಜಾತ್ರೆ ಈ ಬಾರಿ ಕೂಡ ಅದ್ದೂರಿಯಾಗಿ ನೆರವೇರಿತು. ನೂರಾರು ಭಕ್ತರು ದೋಣಿಗಳಲ್ಲಿ ಸಮುದ್ರಯಾನ ಮಾಡಿ ದೇವರ ದರ್ಶನ ಪಡೆದರು. ತಂಡೋಪತಂಡವಾಗಿ ಜನರು ಜಾತ್ರೆಯಲ್ಲಿ ಪಾಲ್ಗೊಂಡರು.
ಕಾರವಾರದ ಬೈತಕೋಲ ಬಂದರಿನಲ್ಲಿ ಜಾತ್ರೆಗೆ ತೆರಳುವ ಸಂಭ್ರಮ ಬೆಳಿಗ್ಗೆಯಿಂದಲೇ ಆರಂಭವಾಗಿತ್ತು. ತಳಿರು ತೋರಣ, ಹೂವಿನ ಹಾರಗಳಿಂದ ಮಧುವಣಗಿತ್ತಿಯಂತೆ ಅಲಂಕರಿಸಲಾದ ಬೋಟುಗಳು ಒಂದು ಕಡೆ ಕಂಡುಬಂದರೆ, ಮತ್ತೊಂದು ಕಡೆ ಜಾತ್ರೆಗೆ ತೆರಳಲು ಗುಂಪು ಗುಂಪಾಗಿ ಆಗಮಿಸಿದ ಭಕ್ತರು ಗಮನ ಸೆಳೆದರು. ಬೋಟುಗಳಲ್ಲಿ ನಿಗದಿತ ಸಂಖ್ಯೆಯ ಭಕ್ತರನ್ನು ಮಾತ್ರ ಹತ್ತಿಸಿ ಕಳುಹಿಸುವ ಮೂಲಕ ಪೊಲೀಸರು ಹಾಗೂ ಆಡಳಿತ ವರ್ಗ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು.
ಕಾರವಾರದಿಂದ ಸುಮಾರು 15 ಕಿಲೋಮೀಟರ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ಮೀನುಗಾರರ ಆರಾಧ್ಯ ದೈವವಾದ ನರಸಿಂಹ ದೇವರ ಜಾತ್ರೆ ಪ್ರತಿವರ್ಷ ನಡೆಯುತ್ತದೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಮೀನುಗಾರರು ಮಾತ್ರವಲ್ಲದೆ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಬೋಟಿನಲ್ಲಿ ಸಮುದ್ರಯಾನ ಮಾಡುತ್ತಾ ದ್ವೀಪ ತಲುಪುವುದೇ ಭಕ್ತರಿಗೆ ವಿಭಿನ್ನ ಅನುಭವವಾಗಿದ್ದು, ದೇವರ ದರ್ಶನದ ಜೊತೆಗೆ ಪ್ರವಾಸದ ಅನುಭವವೂ ದೊರೆಯುತ್ತದೆ. ಬೈತಕೋಲ ಬ೦ದರಿನಿಂದ ಮಾತ್ರ ಬೋಟುಗಳಲ್ಲಿ ತೆರಳಲು ಅವಕಾಶವಿದ್ದು, ಮೀನುಗಾರರು ಉಚಿತವಾಗಿ ಭಕ್ತರನ್ನು ದ್ವೀಪಕ್ಕೆ ಕರೆದೊಯ್ಯುತ್ತಾರೆ.
ಜಾತ್ರೆಯ ಮೂರು ದಿನಗಳ ಕಾಲ ಮೀನುಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಎಲ್ಲರೂ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ದೇವರಿಗೆ ಹರಸಿಕೊಂಡರೆ ಉತ್ತಮ ಮೀನುಗಾರಿಕೆ ಲಭಿಸುತ್ತದೆ ಎಂಬ ನಂಬಿಕೆ ಇದ್ದು, ಭಕ್ತರು ಬಾಳೆಗೊನೆ ಸೇರಿದಂತೆ ವಿವಿಧ ಹರಕೆಗಳನ್ನು ಸಮರ್ಪಿಸುತ್ತಾರೆ. ಉತ್ತರಕನ್ನಡ ಜಿಲ್ಲೆಯ ಪೋಲೀಸ ವರಿಷ್ಠಾಧಿಕಾರಿಗಳಾದ ದೀಪನ್ ಎಂ
ಎನ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಕೂರ್ಮಗಡ ದ್ವೀಪಕ್ಕೆ ತೆರಳಿ ನರಸಿಂಹ ದೇವರ ದರ್ಶನ ಪಡೆದರು.
