ಸುದ್ದಿ ಕನ್ನಡ ವಾರ್ತೆ

ಬೀದರ್: ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಮುಖ್ಯ ಗುರು ಹೃದಯಾಘಾತಕ್ಕೆ ಬಲಿಯಾದ ಘಟನೆ ಶುಕ್ರವಾರ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲಂಜವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸೂರ್ಯಕಾಂತ ಅಮದಾಬಾದೆ (58) ಶಾಲೆಯಲ್ಲೇ ಕೊನೆಯುಸಿರೆಳೆದ ಮುಖ್ಯ ಶಿಕ್ಷಕರು.

ಮಧ್ಯಾಹ್ನ 1.30ರ ಹೊತ್ತಿಗೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಸೂರ್ಯಕಾಂತ ಅವರು ದಿಢೀರ್ ಕುಸಿದುಬಿದ್ದು ಅಸ್ವಸ್ಥರಾದವರ ಮೇಲೇಳಲಿಲ್ಲ. ಹೃದಯಸ್ತಂಭನದಿಂದ ಇವರು ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾರೆ. ಸಾಕಷ್ಟು ಕ್ರಿಯಾಶೀಲರು ಹಾಗೂ ಎಲ್ಲರ ಜೊತೆಗೆ ಅನ್ಯೋನ್ಯ, ಆತ್ಮೀಯರಾಗಿದ್ದ ಇವರ ಈ ಆಕಸ್ಮಿಕ ಸಾವು ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ದಿಗ್ಭ್ರಾಂತಕ್ಕೆ ಕಾರಣವಾಯಿತು. ಅನೇಕರು ಆಘಾತಕ್ಕೊಳಗಾಗಿ ಕಣ್ಣೀರಿಟ್ಟರು.

ಉತ್ತಮ ಕೆಲಸದ ಮೂಲಕ ಸೂರ್ಯಕಾಂತ ಅವರು ಎಲ್ಲರ ಮೆಚ್ಚುಗೆಯ ಶಿಕ್ಷಕರಾಗಿದ್ದರು. ತಮಗೊಪ್ಪಿಸಿದ ಜವಾಬ್ದಾರಿಗಳು ನಿಷ್ಠೆಯಿಂದ ನಿರ್ವಹಿಸಲು ಪ್ರಯತ್ನಿಸುತ್ತಿದ್ದರು. ಇತ್ತೀಚೆಗೆ ಕಾರ್ಯಭಾರದ ಒತ್ತಡ ಹೆಚ್ಚಾಗಿತ್ತು. ಶೈಕ್ಷಣಿಕ ಅಭಿವೃದ್ಧಿ, ಶಾಲೆ ಆಡಳಿತಾತ್ಮಕ ಕಾರ್ಯಗಳು, ಇಲಾಖೆಯಿಂದ ಪ್ರತಿದಿನ ಬರುವ ಹೊಸ ಹೊಸ ಆದೇಶ, ಮೊಟ್ಟೆ, ಬಾಳೆಹಣ್ಣು, ಬಿಸಿಯೂಟ, ದಾಖಲೆ ನಿರ್ವಹಣೆ, ಆನ್‌ಲೈನ್ ಮಾಹಿತಿ ಅಪ್‌ಲೋಡ್ ಇನ್ನಿತರೆ ಕೆಲಸದಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು. ಅಕಾಲಿಕ ಸಾವಿಗೆ ಒತ್ತಡವೂ ಕಾರಣ ಎಂದು ಶಿಕ್ಷಕ ವಲಯದಲ್ಲಿ ಗುಸುಗುಸು ಚರ್ಚೆ ನಡೆದಿವೆ.

ಮೃತರ ಅಂತ್ಯಕ್ರಿಯೆಯು ಶನಿವಾರ ಮಧ್ಯಾಹ್ನ 12.30ಕ್ಕೆ ಸ್ವಗ್ರಾಮ ಭಾಲ್ಕಿ ತಾಲೂಕಿನ ಬಾಜೊಳಗಾದಲ್ಲಿ ನಡೆಯಲಿದೆ. ಭಾಲ್ಕಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಜೆ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.