ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ: ತಾಲ್ಲೂಕಿನ ನೇಗಿನಹಾಳ ಗ್ರಾಮದಲ್ಲಿ ಬೈಲಹೊಂಗಲ ತಾಲೂಕು 8 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ 6 ರಂದು ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಸಾಹಿತಿ ಪ್ರೊ. ಕೆ.ಎಸ್. ಕೌಜಲಗಿ(ಕೊಳದೂರು) ಆಯ್ಕೆಯಾಗಿದ್ದಾರೆ.
ಪಟ್ಟಣದಲ್ಲಿ ನಡೆದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಬೈಲಹೊಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಿ ಮಂಡಳಿ ಸದಸ್ಯರಾದ ಸಿ.ಕೆ ಮೆಕ್ಕೇದ, ಮೋಹನ ಬಸನಗೌಡ ಪಾಟೀಲ, ಎಸ್.ಡಿ ಗಂಗಣ್ಣವರ, ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ, ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ, ಪದಾಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್ ಪ್ಯಾಟಿ, ಶ್ರೀಕಾಂತ ಉಳ್ಳೇಗಡ್ಡಿ, ದುಂಡಪ್ಪ ಗರಗದ, ಅನಿಲ ರಾಜನ್ನವರ, ಲಕ್ಷ್ಮೀ ಮುಗಡ್ಲಿಮಠ, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಕೃಷ್ಣಾಜಿ ಕುಲಕರ್ಣಿ, ಉಪಸಮಿತಿ ಸದಸ್ಯರಾದ ಅನ್ವರ್ ದೇವರದವರ, ಮಡಿವಾಳಪ್ಪ ಮರಿತಮ್ಮನವರ ಉಪಸ್ಥಿತರಿದ್ದರು. ರಾಜು ಹಕ್ಕಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಸಮ್ಮೇಳನಾಧ್ಯಕ್ಷರ ಸಂಕ್ಷಿಪ್ತ ಪರಿಚಯ:
ಪ್ರೊ. ಕೆ.ಎಸ್. ಕೌಜಲಗಿ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಹೋಬಳಿಯ ಕೊಳದೂರು ಗ್ರಾಮದಲ್ಲಿ 15.06.1948 ರಲ್ಲಿ ಜನಿಸಿದ್ದಾರೆ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪದವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಪಿ.ಸಿ ಜಾಬಿನ್ ಕಾಲೇಜು, ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು, ಗದಗಿನ ಜೆ.ಟಿ ಕಾಲೇಜು, ಹುಬ್ಬಳ್ಳಿಯ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರೊ. ಕೆ.ಎಸ್. ಕೌಜಲಗಿ ಅವರು ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ, ಎನ್.ಎಸ್.ಎಸ್ ಪ್ರಿಯದರ್ಶಿನಿ ಇಂದಿರಾಗಾಂಧಿ ರಾಷ್ಟೀಯ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ವಿಶ್ವವಿದ್ಯಾಲಯ ಮತ್ತು ರಾಜ್ಯಮಟ್ಟದ ನಾಯಕತ್ವ ತರಬೇತಿ ಶಿಬಿರದ ಸಂಯೋಜನಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರೊ. ಕೆ.ಎಸ್. ಕೌಜಲಗಿ ಅವರು ವಚನ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು, ನರೇಂದ್ರದ ಮಹಾಂತ ಶಿವಯೋಗಿಗಳು, ಶಿರಸಂಗಿ ಲಿಂಗರಾಜರು, ನರಗುಂದದ ಶಿಲ್ಪಿ, ರುದ್ರಸ್ವಾಮಿಗಳು, ನಮ್ಮ ಪ್ರಾಚಾರ್ಯರು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕೆ.ಎಲ್.ಇ ಸಂಸ್ಥೆಯ ಇತಿಹಾಸ ರಚನೆಯ ಸಂಪಾದಕ ಮಂಡಳಿ ಸದಸ್ಯರಾಗಿ, ವೀರೇಶ ಕಿರಣ ತ್ರೈಮಾಸಿಕ ಪತ್ರಿಕೆಯ ಗೌರವ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರದ್ದು. ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಕಲ್ಯಾಣ ಕ್ರಾಂತಿಯ ನಂತರ ಮಡಿವಾಳ ಮಾಚಿದೇವ, ಅಲ್ಲಮಪ್ರಭು, ಬಯಲಾಟಗಳು, ವಿಜಯನಗರ ಕುರಿತು ಕನ್ನಡ ಕಾದಂಬರಿಗಳು ಮುಂತಾದ ವಿಷಯಗಳ ಮೇಲೆ ಉಪನ್ಯಾಸ ಮಾಡಿದ್ದಾರೆ.
ಪ್ರೊ. ಕೆ.ಎಸ್. ಕೌಜಲಗಿ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಅನೇಕ ವಿಚಾರ ಸಂಕಿರಣ, ಸಮ್ಮೇಳನ, ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷಾರ್ಥಿಗಳಿಗೆ ಮಾರ್ಗದರ್ಶನ, ಕನ್ನಡ ಬೋಧನೆ ಮತ್ತು ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರದ್ದಾಗಿದೆ. ಚಿತ್ರದುರ್ಗದ ಮಠದಿಂದ ಶಿಕ್ಷಣ ವಿಭೂಷಣ, ಶಿಕ್ಷಕ ರತ್ನ, ಶಿಕ್ಷಣ ಪ್ರೇಮಿ ಪ್ರಶಸ್ತಿ, ಹುಬ್ಬಳ್ಳಿಯ ವಿಜಯಕುಮಾರ ಗುಂಜಾಳ ಗೆಳೆಯರ ಬಳಗದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ಹುಬ್ಬಳ್ಳಿಯ ಮೂರುಸಾವಿರ ಮಠದಿಂದ ಶ್ರೀ ಬಸವ ಪ್ರಶಸ್ತಿ, ಸುಹಾಸ ಸೇವಾ ಪ್ರಶಸ್ತಿ, ಹುಬ್ಬಳ್ಳಿ ಧಾರವಾಡ ಮಹಾನಗರ ಸಭೆಯ ವತಿಯಿಂದ ಧೀಮಂತ ಪ್ರಶಸ್ತಿ ಮುಂತಾದ ಗೌರವ ಸನ್ಮಾನಗಳಿಗೆ ಇವರು ಭಾಜನರಾಗಿದ್ದಾರೆ. ವಿವಿಧ ಸಂಘ ಸಂಸ್ಥೆಗಳಿಗೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಹಾಗೂ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಚನ ಸಾಹಿತ್ಯ, ಜನಪದ ಸಾಹಿತ್ಯ, ಭಾಷಾ ಶಾಸ್ತ್ರಗಳ ಬಗ್ಗೆ ಅಧ್ಯಯನ ಮಾಡಿದ್ದು ತಮ್ಮ 77 ನೆಯ ವಯಸ್ಸಿನಲ್ಲಿಯೂ ನಿರಂತರವಾಗಿ ಸಮಾಜ ಸೇವೆ, ಸಂಘಟನೆ, ಉಪನ್ಯಾಸ, ಸಾಹಿತ್ಯ ರಚನೆಯಲ್ಲಿ ಪ್ರೊ. ಕೌಜಲಗಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
