ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ನಲ್ಲಿ ಮಂಗಳವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದೆ. ಚೋರ್ಲಾ ಘಾಟ್ ನ ವಡಲೆ ಟಮ್ ಎಂಬ ದುರ್ಗಮ ಪ್ರದೇಶದಲ್ಲಿ ಬೊಲೆರೊ ವಾಹನಕ್ಕೆ ಇದ್ದಕ್ಕಿದ್ದಂತೆಯೇ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದ್ದು ಈ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಈ ಅಗ್ನಿ ಅವಘಡದಲ್ಲಿ ಸಂಪೂರ್ಣ ವಾಹನ ಸುಟ್ಟು ಕರಕಲಾಗಿದೆ. ಈ ಘಟನೆಯಲ್ಲಿ ಸುಮಾರು 5 ಲಕ್ಷ ರೂ ಹಾನಿ ಸಂಭವಿಸಿದೆ. ಅಗ್ನಿ ಶಾಮಕ ದಳದ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿ ಹೆಚ್ಚುತ್ತಿದ್ದ ಇತರ ಹಾನಿಯನ್ನು ತಪ್ಪಿಸಿದ್ದಾರೆ.

ಲಭ್ಯವಾಗಿರುವ ಮಾಹಿತಿಯ ಅನುಸಾರ- ಡಿಸೆಂಬರ್ 30 ರಂದು ಬೆಳಗಿನ ಜಾವ 3.51 ರ ಸುಮಾರು ಈ ಘಟನೆ ನಡೆದಿದೆ. ಕರ್ನಾಟಕದ ಸಚಿನ್ ಮರಿಯಪ್ಪ ರವರ ಮಾಲೀಕತ್ವದ ಈ ಬೊಲೆರೊ (ಕೆಎ-34, ಸಿ-5167) ಈ ವಾಹನವು ಚೋರ್ಲಾ ಘಾಟ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿಹೊತ್ತಿಕೊಂಡಿದೆ.

ವಾಹನ ಚಾಲಕನಿಗೆ ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುವಷ್ಟರ ಹೊತ್ತಿಗೆ ಬೆಂಕಿ ರೌದ್ರರೂಪ ತಾಳಿ ಸಂಪುರ್ಣ ಬೊಲೆರೊ ವಾಹನಕ್ಕೆ ಹೊತ್ತಿ ಉರಿಯಲಾರಂಭಿಸಿತು. ದಟ್ಟ ಅರಣ್ಯ ಹಾಗೂ ಬೆಳಗಿನ ಸಮಯವಾಗಿದ್ದರಿಂದ ಕೂಡಲೇ ಅಗತ್ಯ ಸಹಾಯ ಲಭಿಸಲು ತೊಂದರೆಯಾಯಿತು ಎನ್ನಲಾಗಿದೆ. ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದರು. ಬೆಂಕಿಗ್ಗೆ 6.15 ರ ವರೆಗೂ ಕೂಡ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿತ್ತು. ನಂತರ ಸಂಪೂರ್ಣವಾಗಿ ಬೆಂಕಿ ನಂದಿಸಲು ಯಶಸ್ವಿಯಾದರೂ ಕೂಡ ಅಷ್ಟುಹೊತ್ತಿಗಾಗಲೇ ಬೊಲೆರೊ ವಾಹನ ಸಂಪೂರ್ಣವಾಗಿ ಸುಟ್ಟುಹೋಗಿತ್ತು.

ಈ ಅಗ್ನಿ ಅವಘಡದಲ್ಲಿ ಸುಮಾರು 5 ಲಕ್ಷ ರೂ ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಆದರೆ ಬೊಲೆರೊ ಜೀಪ್ ನಲ್ಲಿ ತುಂಬಿದ್ದ ಸುಮಾರು 2 ಲಕ್ಷ ರೂ ವಸ್ತುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.