ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ಬಾಂಗ್ಲಾದೇಶದ ಮೈಮನ್‌ಸಿಂಗ್ ಪ್ರದೇಶದಲ್ಲಿ ಹಿಂದೂ ದೀಪು ಚಂದ್ರ ದಾಸ್ ಅವರನ್ನು ಮತೀಯ ಗುಂಪೊಂದು ಮರಕ್ಕೆ ಕಟ್ಟಿಹಾಕಿ ಜೀವಂತವಾಗಿಯೇ ಬೆಂಕಿಗೆ ಆಹುತಿಗೊಳಿಸಿದೆ. ಜೊತೆಗೆ ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ಅವರ ಮನೆಗಳು ಹಾಗೂ ಅಂಗಡಿಗಳನ್ನು ಸುಡಲಾಗುತ್ತಿದೆ. ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಈ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಲು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು.
ಬಾಂಗ್ಲಾದೇಶದಲ್ಲಿ ನಿರಂತರ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರವನ್ನು ತಡೆಯಲು ಭಾರತ ಸರ್ಕಾರವು ಬಾಂಗ್ಲಾದೇಶದ ಮೇಲೆ ಆರ್ಥಿಕ, ವ್ಯವಹಾರಿಕ ಹಾಗೂ ರಾಜಕೀಯ ನಿರ್ಬಂಧಗಳನ್ನು ವಿಧಿಸಬೇಕೆಂದು ಬೇಡಿಕೆ ಇಡಲಾಗಿದೆ. ಜೊತೆಗೆ ಬಾಂಗ್ಲಾದೇಶದ ಉಗ್ರ ಹಾಗೂ ಮತೀಯ ಗುಂಪುಗಳ ವಿರುದ್ಧ ಕಠಿಣ ಮಿಲಿಟರಿ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ.
ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಮೇಲೆ ಢಾಕಾದಲ್ಲಿ ಗುಂಡಿನ ದಾಳಿ ನಡೆದಿದೆ. ಅವರ ಮರಣದ ನಂತರ ಹಿಂದೂ ಸಮಾಜದ ವಿರುದ್ಧ ಸಂಯೋಜಿತ ಹಿಂಸಾಚಾರ ಆರಂಭವಾಗಿದೆ. ಹಿಂದೂ ಮನೆಗಳು, ಅಂಗಡಿಗಳು ಮತ್ತು ದೇವಸ್ಥಾನಗಳನ್ನು ಗುರಿಯಾಗಿಸಲಾಗುತ್ತಿದೆ. ನೇರ ವಿಡಿಯೋಗಳು, ಸಾಕ್ಷ್ಯಗಳು ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳು ಸತ್ಯವನ್ನು ಬಹಿರಂಗಪಡಿಸಿವೆ. ಆದರೂ ಬಾಂಗ್ಲಾದೇಶ ಸರ್ಕಾರ ಕ್ರಮ ಕೈಗೊಳ್ಳುವುದನ್ನು ತಪ್ಪಿಸುತ್ತಿದೆ. ಜನಗಣನೆಯ ಪ್ರಕಾರ ೧೯೪೧ರಲ್ಲಿ ೨೮% ಇದ್ದ ಹಿಂದೂ ಜನಸಂಖ್ಯೆ ಈಗ ಕೇವಲ ೭.೮% ಮಾತ್ರ ಉಳಿದಿದೆ. ಇದು ಹಿಂದೂ ನಿರ್ಮೂಲನೆಯ ಪ್ರಕ್ರಿಯೆಯಾಗಿದೆ.
ಭಾರತ-ಬಾಂಗ್ಲಾದೇಶ ಒಪ್ಪಂದದ ಮೂಲಕ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ, ಸಂಯುಕ್ತ ರಾಷ್ಟ್ರಗಳು ಹಾಗೂ ಮಾನವ ಹಕ್ಕುಗಳ ಆಯೋಗದಲ್ಲಿ ವಿಷಯವನ್ನು ಎತ್ತಿ ಹಿಡಿದು ಫ್ಯಾಕ್ಟ್-ಫೈಂಡಿಂಗ್ ಮಿಷನ್ ನಡೆಸುವುದು, ಹಿಂಸೆಗೆ ಒಳಗಾದ ಹಿಂದೂಗಳಿಗೆ ನಾಗರಿಕತೆ ಹಾಗೂ ಪುನರ್ವಸತಿ ಕಲ್ಪಿಸುವುದು, ದೇವಸ್ಥಾನಗಳು ಮತ್ತು ಧಾರ್ಮಿಕ ಆಸ್ತಿಗಳ ಸಂಯುಕ್ತ ಸಮೀಕ್ಷೆ, ಬಾಂಗ್ಲಾದೇಶದ ಹಿಂದೂ ಸಮಾಜದೊಂದಿಗೆ ನೇರ ಸಂವಹನ ವ್ಯವಸ್ಥೆ ಇತ್ಯಾದಿ ಬೇಡಿಕೆಗಳು ಸೇರಿವೆ. ವಿಶ್ವದ ಅತಿದೊಡ್ಡ ಹಿಂದೂ ಬಹುಸಂಖ್ಯಾತ ದೇಶವಾಗಿರುವ ಭಾರತವು, ಬಾಂಗ್ಲಾದೇಶದ ಹಿಂದೂಗಳ ಸುರಕ್ಷತೆಗಾಗಿ ರಾಜಕೀಯ, ಕಾನೂನು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸಬೇಕೆಂದು ಆಗ್ರಹಿಸಲಾಗಿದೆ.
ಶ್ರೀ ರಾಮ ಸೇನೆ, ಆಜಾದ್ ಬ್ರಿಗೇಡ್ ಸೇನೆ, ರಾಷ್ಟ್ರ ರಕ್ಷಣಾ ಪಡೆ, ಹಿಂದೂ ಜಾಗರಣ ವೇದಿಕೆ, ಸೇವಾ ಕನ್ನಡಿಗ ಟ್ರಸ್ಟ್, ಶಿವಾಜಿ ಸೇನೆ, ಹಿಂದೂ ಜನಜಾಗೃತಿ ಸಮಿತಿ, ವಕೀಲರು, ಉದ್ಯಮಿಗಳು ಸೇರಿದಂತೆ 200ಕ್ಕೂ ಹೆಚ್ಚು ರಾಷ್ಟ್ರಪ್ರೇಮಿಗಳು ಪ್ರತಿಭಟನೆಯಲ್ಲಿ ಸಹಭಾಗವಾಗಿದ್ದರು.
