ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ಪಣಜಿ ಸಮೀಪದ ಚಿಂಬಲ್ ನಲ್ಲಿ ಯುನಿಟಿ ಮಾಲ್ ಯೋಜನೆಯ ವಿರುದ್ಧ ಚಿಂಬಲ್ ಗ್ರಾಮಸ್ಥರು ಭಾನುವಾರದಿಂದ ಬೃಹತ್ ಆಂದೋಲನ ಆರಂಭಿಸಿದ್ದಾರೆ. ಈ ಯೋಜನೆಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರೂ ಕೂಡ ಕಟ್ಟಡ ನಿರ್ಮಾಣಕ್ಕೆ ಮಂಜೂರಿ ನೀಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನ್ಯಾಯಾಲಯ ಆದೇಶ ನೀಡಿರುವ ಸಂದರ್ಭದಲ್ಲಿ ಗ್ರಾಮಪಂಚಾಯತಿ ಈ ಯೋಜನೆಗೆ ಪರವಾನಗಿ ನೀಡಿದೆ. ಇದು ಖಾಯ್ದೆಯ ಉಲ್ಲಂಘನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಯುನಿಟಿ ಮಾಲ್ ಯೋಜನೆಯಿಂದ ಚಿಂಬಲ್ ಗ್ರಾಮದ ಕೃಷಿ ಕ್ಷೇತ್ರ,ಜಲ ಮೂಲ ಹಾಗೂ ಪರಿಸರದ ಮೇಲೆ ವಿಪರೀತ ಪರಿಣಾಮವಾಗಿದೆ. ಸ್ಥಳೀಯ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಈ ಯೋಜನೆ ಆರಂಭಿಸಲಾಗಿದೆ. ನ್ಯಾಯಾಲಯವು ತಡೆಯಾಜ್ಞೆ ನೀಡಿದರೂ ನಿರ್ಮಾಣ ಕಾರ್ಯ ನಡೆಸುವುದು ನ್ಯಾಯಾಲಯಕ್ಕೆ ಅವಮಾನ ಮಾಡಿದಂತೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರತಿಭಟನಾ ಸತ್ಯಾಗೃಹ ನಡೆಸಿರುವ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು , ವಯೋವೃದ್ಧರು ಪಾಲ್ಗೊಂಡಿದ್ದಾರೆ. ಸಂಬಂಧಿತ ಆದೇಶವನ್ನು ರದ್ದೂಗೊಳಿಸಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕು ಎಂದು ಗ್ರಾಮಸ್ಥರು ಆಘ್ರಹಿಸಿದ್ದಾರೆ.
ಆದರೆ ಯುನಿಟಿ ಮಾಲ್ ನಿರ್ಮಾಣವನ್ನು ಸಂಬಂಧಿತ ವಿಭಾಗಗಳಿಂದ ನೊ ಒಬ್ಜಕ್ಷನ್ ಪ್ರಮಾಣಪತ್ರವನ್ನು ಹಾಗೂ ಚಿಂಬಲ್ ಪಂಚಾಯತಿಯಿಂದ ಪರವಾನಗಿ ಪಡೆದುಕೊಂಡ ನಂತರವೇ ಕಟ್ಟಡ ನಿರ್ಮಾಣ ಆರಂಭಿಸಿದ್ದೇವೆ ಎಂದು ಕಳೆದ ಎರಡು ದಿನಗಳ ಹಿಂದಷ್ಟೇ ರಾಜ್ಯ ಪ್ರವಾಸೋದ್ಯಮ ಇಲಾಖೆ ಸ್ಪಷ್ಟಪಡಿಸಿತ್ತು.
