ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಭೂ ಆಧಾರಿತ ಕ್ಯಾಸಿನೊಗಳಲ್ಲಿ ಅಕ್ರಮ ಲೈವ್ ಗೇಮಿಂಗ್ (Illegal live gaming) ನಡೆಸುತ್ತಿರುವ ಕುರಿತ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಇದು ಕಾನೂನಿಗೇ ನೇರ ಸವಾಲುಹಾಕುತ್ತಿದೆಯೆ..? ಗೋವಾ ರಾಜ್ಯದಲ್ಲಿ ಈಗಾಗಲೇ ಇರುವ ಜೂಜಾಟ ಕಾನೂನಿನ ಹೊರತಾಗಿಯೂ ಆಡಳಿತ,ಪೋಲಿಸರು, ಸಂಬಂಧಿತ ಸಂಸ್ಥೆಗಳು ಈ ಕಾನೂನು ಬಾಹಿರ ಚಟುವಟಿಕೆಯನ್ನು ನಿರ್ಲಕ್ಷಿಸುತ್ತಿವೆಯೇ…? ಎಂಬ ಪ್ರಶ್ನೆ ಎದುರಾಗಿದೆ.
ಗೋವಾದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಜೂಜಾಟ ಕಾನೂನಿನ ಪ್ರಕಾರ ಪಣಜಿಯ ಮಾಂಡವಿ ನದಿಯಲ್ಲಿರುವ ಕ್ಯಾಸಿನೊ ಹಡಗುಗಳಿಗೆ (Casino ship) ಮಾತ್ರ ಲೈವ್ ಗೇಮಿಂಗ್ ಅನುಮತಿಯನ್ನು ನೀಡಲಾಗಿದೆ. ಭೂಮಿಯಲ್ಲಿರುವ ಸ್ಟಾರ್ ರೇಟೆಡ್ ಹೋಟೆಲ್ ಗಳಲ್ಲಿರುವ ಕ್ಯಾಸಿನೊಗಳಲ್ಲಿ ಇಲೆಕ್ಟ್ರಾನಿಕ್ ಅಥವಾ ಸ್ಲಾಟ್ ಆಟಗಳನ್ನು ಆಡಲು ಮಾತ್ರ ಅನುಮತಿಸಲಾಗಿದೆ. ಆದರೆ ಪ್ರಸ್ತುತ ಅನೇಕ ಭೂ ಆಧಾರಿತ ಕ್ಯಾಸಿನೊಗಳಲ್ಲಿ ಜೂಜಾಟವನ್ನು ಹಸ್ತಚಾಲಿತವಾಗಿ ಆಡಲಾಗುತ್ತಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಗೋವಾದಲ್ಲಿ ನದಿಯಲ್ಲಿರುವ ಕ್ಯಾಸಿನೊಗಳನ್ನು ಹೊರತುಪಡಿಸಿ ಭೂಮಿಯಲ್ಲಿರುವ ಕ್ಯಾಸಿನೊಗಳಲ್ಲಿ ಜೂಜಾಟ ನಡೆಸುತ್ತಿರುವ ಕೆಲವು ವೀಡಿಯೊಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದಾಗಿ ಭೂಮಿಯಲ್ಲಿರುವ ಕ್ಯಾಸಿನೊಗಳಲ್ಲಿ ಬ್ಯಾಕರಟ್, ಟೀನ್ ಪಟ್ಟಿ, ಅಂದರ್-ಬಾಹರ್, ಪೋಕರ್ ಇಂತಹ ಆಟಗಳನ್ನು ಆಡಲಾಗುತ್ತಿರುವುದು ಕಂಡುಬಂದಿದೆ. ಈ ಮೂಲಕ ಕಾನೂನಿನ ಉಲ್ಲಂಘನೆಯಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವರೇ..? ಎಂಬ ಪ್ರಶ್ನೆ ಎದುರಾಗಿದೆ.
ಇತ್ತೀಚೆಗಷ್ಟೇ ಈ ವಿಷಯವು ಗೋವಾ ವಿಧಾನಸಭೆಯಲ್ಲಿಯೂ ಚರ್ಚೆಗೆ ಬಂದಿತ್ತು. ಅಂದು ಪೋಲಿಸರು ಹಲವು ಅಕ್ರಮ ಕ್ಯಾಸಿನೊಗಳ ಮೇಲೆ ಧಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಅದು ಕೇವಲ ತಾತ್ಕಾಲಿಕವೇ…? ಎಂಬ ಪ್ರಶ್ನೆ ಎದುರಾಗಿದೆ. ಪೋಲಿಸರ ಧಾಳಿಯ ನಂತರ ಇಂತಹ ಅಕ್ರಮ ಚಟುವಟಿಕೆಗಳು ಇದೀಗ ಇನ್ನೂ ಉತ್ಸಾಹದಿಂದ ಆರಂಭಗೊಂಡಂತೆ ಕಂಡುಬರುತ್ತಿದೆ.
ಕಳೆದ ಕೆಲ ತಿಂಗಳ ಹಿಂದಷ್ಟೇ ಗೋವಾ-ಕಾರವಾರ ಗಡಿಯಲ್ಲಿ ಇಂತಹದ್ದೇ ಅಕ್ರಮ ಜೂಜು ಅಡ್ಡೆಯ ಮೇಲೆ ಧಾಳಿ ನಡೆಸಿ ಉತ್ತರಕನ್ನಡ ಜಿಲ್ಲೆಯ ಹಲವರನ್ನು ಪೋಲಿಸರು ಬಂಧಿಸಿದ್ದರು. ಇದೀಗ ಹೊಸ ವರ್ಷ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗೋವಾದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆಯೇ…? ಎಂಬ ಆತಂಕ ಕೂಡ ಮನೆ ಮಾಡಿದೆ. ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣವಿಲ್ಲವೇ..? ಪ್ರವಾಸೋದ್ಯಮದ ಹೆಸರಿನಲ್ಲಿ ಇಂತಹ ಅಕ್ರಮ ದಂಧೆ ನಡೆಸುವುದನ್ನು ಕೂಡಲೇ ತಡೆಯಬೇಕಿದೆ. ಈಗಾಗಲೇ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಗೋವಾದಲ್ಲಿ ಅಕ್ರಮ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಂಡರೆ ಅದು ಗೋವಾಕ್ಕೆ ಕೆಟ್ಟ ಹೆಸರು ಬಂದಂತೆಯೇ ಸರಿ.
