ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ನವೀಕರಣ ಕಾಮಗಾರಿ ಪುನರಾರಂಭಿಸಲಾಗಿದೆ, ಈ ಹಿನ್ನೆಲೆಯಲ್ಲಿ ಜನವರಿ 2 ರಿಂದ ಭಕ್ತರಿಗೆ,ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕಳೆದ ನವೆಂಬರ್ 27 ರಿಂದ ಶ್ರೀಗೋಕರ್ಣ ಪರ್ತಗಾಳಿ ಮಠದಲ್ಲಿ 550 ನೇಯ ವರ್ಷದ ವರ್ಧಂತಿ ಉತ್ಸವ ಆರಂಭಗೊಂಡು 10 ದಿನಗಳಕಾಲ ವಿವಿಧ ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮ ಜರುಗಿತ್ತು. ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿಯವರು ಏಷ್ಯದ ಅತಿ ಎತ್ತರದ ಶ್ರೀರಾಮನ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿದ್ದರು. ಈ 10 ದಿನಗಳ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ದೇಶದ ವಿವಿಧ ರಾಜ್ಯಗಳಿಂದ ಮಠಕ್ಕೆ ಆಗಮಿಸುವ ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.ಸುತ್ತಮುತ್ತಲಪ್ರದೇಶ ಸೇರಿದಂತೆ ಮಠದ ಆವರಣದಲ್ಲಿ ಅಗತ್ಯ ನಿರ್ಮಾಣ ಕಾರ್ಯ ಹಾಗೂ ಅಂತಿಮ ಹಂತದ ಕಾಮಗಾರಿಗಳು ಪುನರಾರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಸೂಚನೆಯ ವರೆಗೂ ಭಕ್ತರು,ಪ್ರವಾಸಿಗರು, ಮತ್ತು ಸಾರ್ವಜನಿಕರು ಪರ್ತಗಾಳಿ ಮಠದ ಆವರಣಕ್ಕೆ ಭೇಟಿ ನೀಡಬಾರದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಭಕ್ತರ ಧಾರ್ಮಿಕ ಭಾವನೆಗಳಿಗೆ ಪರ್ತಗಾಳಿ ಮಠದ ಆಡಳಿತ ಸಮೀತಿ ಸಂಪೂರ್ಣ ಗೌರವ ನೀಡುತ್ತದೆ. ಆದರೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕಾಗಿರುವುದರಿಂದ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ ಈ ತಾತ್ಕಾಲಿಕ ಬಂದ್ ಅನಿವಾರ್ಯವಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡ ನಂತರ ಮಠ ಪುನರ್ ತೆರೆಯುವ ಕುರಿತು ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
