ಸುದ್ದಿ ಕನ್ನಡ ವಾರ್ತೆ

ಉಡುಪಿ:ವಿಶ್ವ ಗೀತಾ ಪರ್ಯಾಯ ಖ್ಯಾತಿಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದಲ್ಲಿ ಸಂಕಲ್ಪಿಸಿದ್ದ ಕೋಟಿ ಗೀತಾ ಲೇಖನ ಯಜ್ಞ ಹಾಗೂ ಶ್ರೀಗಳ ಸನ್ಯಾಸ ಜೀವನದ ಸುವರ್ಣ ವರ್ಷಾಚರಣೆ ನೆನಪಿಗಾಗಿ ಗೀತಾಚಾರ್ಯ ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥದ ಪ್ರಥ‌ಮ ರಥೋತ್ಸವ ಡಿ.27ರಂದು ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ.26ರಂದು ಅಪರಾಹ್ನ 3.30ಕ್ಕೆ ಜೋಡುಕಟ್ಟೆಯಿಂದ ಕೃಷ್ಣಮಠದ ವರೆಗೆ ಸುವರ್ಣ ರಥದ ವೈಭವದ ಶೋಭಾಯಾತ್ರೆ ನಡೆಯಲಿದ್ದು, ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಮೆರವಣಿಗೆಗೆ ಚಾಲನೆ ನೀಡುವರು. ಸಂಜೆ 6.30ಕ್ಕೆ ರಾಜಾಂಗಣದಲ್ಲಿ ಧರ್ಮಸಭೆ ನಡೆಯಲಿದೆ.

ಡಿ. 27ರಂದು ಸಂಜೆ 6 ಗಂಟೆಗೆ ರಥಬೀದಿಯಲ್ಲಿ ಪಾರ್ಥಸಾರಥಿ ಸ್ವರ್ಣರಥದಲ್ಲಿ ಶ್ರೀಕೃಷ್ಣನ ಉತ್ಸವಕ್ಕೆ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ. ಮಂತ್ರಾಲಯದ ಶ್ರೀ ಸುಬುಧೇಂದ್ರ ಶ್ರೀಪಾದರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಇದ್ದರು.

ಕೋಟಿ ತುಳಸಿ ಅರ್ಚನೆ
ಉಡುಪಿ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ ಮಾತನಾಡಿ, ಡಿ.28ರಂದು ಬೆಳಗ್ಗೆ 9 ಗಂಟೆಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿಯ 26 ವಲಯಗಳ ಸುಮಾರು 2 ಸಾವಿರ ವಿಪ್ರ ಬಾಂಧವರೊಂದಿಗೆ ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ ನಡೆಯಲಿದೆ. ಬೆಂಗಳೂರು, ಮೈಸೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ತುಳಸಿ ತರಿಸಲಾಗುತ್ತಿದೆ ಎಂದರು.

ಶ್ರೀನಿವಾಸ ಕಲ್ಯಾಣೋತ್ಸವ
ಡಿ.30ರಂದು ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಸಂಜೆ 5ರಿಂದ ರಾಜಾಂಗಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ ಎಂದು ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ತಿಳಿಸಿದರು.

ಬ್ರಾಹ್ಮಣ ಸಭಾದ ಶ್ರೀನಿವಾಸ ಬಲ್ಲಾಳ್​, ರಾಜೇಂದ್ರ, ನಾಗರಾಜ ಉಪಾಧ್ಯಾಯ, ಹಯವದನ ಭಟ್​ ಮೊದಲಾದವರಿದ್ದರು.