ಸುದ್ದಿ ಕನ್ನಡ ವಾರ್ತೆ

ಶಿರಸಿ: ಕಳೆದ ಶಿರಸಿ ಮಾರಿಕಾಂಬಾ ಜಾತ್ರೆಗೆ ೫ ಕೋಟಿ ರೂಪಾಯಿ ಅನುದಾನ ತಂದಿರುವುದಾಗಿ ಶಾಸಕರು‌ ಹೇಳಿದ್ದರು, ಆರ್ಟಿಐ ಮೂಲಕ ಅನುದಾನ ಇನ್ನು ಬಂದಿಲ್ಲ ಎಂಬುದು ತಿಳಿದಾಗ ಮುಂದಿನ ದಿನಗಳಲ್ಲಿ ಬರಲಿಕ್ಕಿದೆ ಎನ್ನಲಾಯಿತು. ಆದರೆ ಇತ್ತೀಚಿಗೆ ಶಿರಸಿ ನಗರ ಸಭೆ ಅಧ್ಯಕ್ಷರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಳೆದ ಜಾತ್ರೆಗೆಂದು ಯಾವುದೇ ಅನುದಾನ ಬಂದಿಲ್ಲ ಎಂಬ ಸತ್ಯ ಬಯಲಾಗಿದೆ. ಈ ಕೂಡಲೇ ಮಾರಿಕಾಂಬೆಯ ಸನ್ನಿಧಾನದಲ್ಲಿ ಶಾಸಕರು ಪ್ರಾಯಶ್ಚಿತ ಮಾಡಿಕೊಂಡು, ಈ ಬಾರಿಯ ಜಾತ್ರೆಗಾದರೂ 5 ಕೋಟಿ ರೂಪಾಯಿ ಅನುದಾನ ತರಲಿ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಾಪ ಕಳೆದುಕೊಳ್ಳಲು ದೇವಸ್ಥಾನಕ್ಕೆ ತೆರಳುತ್ತಾರೆ. ಆದರೆ, ದೇವಸ್ಥಾನದ ವಿಷಯದಲ್ಲಿ ಸುಳ್ಳು ಹೇಳುವುದೇ ಅತಿದೊಡ್ಡ ಪಾಪ. ಕಳೆದ ಜಾತ್ರೆಯ ಬಿಲ್ ಗಳು ಹಾಗೆಯೆ ಇದೆ ಎಂಬ ಮಾಹಿತಿ ಇದೆ. ಸಾಕಷ್ಟು ಸುಧಾರಣಾ ಕೆಲಸಗಳು ಆಗಬೇಕು. ಜಾತ್ರೆಯ ನೆಪದಲ್ಲಾದರೂ ಈ ಕೆಲಸಗಳು ನಡೆಯುವಂತಾಗಬೇಕು. ಸರಕಾರಕ್ಕೆ ಕರಾವಳಿ ಉತ್ಸವಕ್ಕೆ, ಇನ್ನಿತರ ಮೋಜು ಮಸ್ತಿ ಮಾಡಲು ಹಣವಿದೆ ಆದರೆ ಶಿರಸಿ ಜಾತ್ರೆಗೆ ನೀಡುವಾಗ ಹಣವಿಲ್ಲ. ಕಳೆದ ಜಾತ್ರೆಯ ಅನುದಾನದ ಕುರಿತಾದ ಸುಳ್ಳಿನ ಕರ್ಮಕಾಂಡವನ್ನು ಬಿಚ್ಚಿಡಬೇಕಿದೆ ಎಂದರು.

ಕಾಂಗ್ರೆಸ್ ಸರಕಾರದಲ್ಲಿ ಇಲ್ಲಿಯವರೆಗೆ ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ದೇವರಾಜ್ ಅರಸು ವಸತಿ ಯೋಜನೆ ಅಡಿಯಲ್ಲಿ ಒಂದೇ ಒಂದು ಮನೆಯೂ ಶಿರಸಿ ಸಿದ್ದಾಪುರ ಭಾಗದಲ್ಲಿ ಮಂಜೂರಾಗಿಲ್ಲ ಎಂದು ಆರ್ಟಿಐನಲ್ಲಿ ತಿಳಿದು ಬಂದಿದೆ. ಮನೆಹಾನಿ ಆದ ಸ್ಥಳಗಳಿಗೆ ಭೇಟಿ ನೀಡುವ ಶಾಸಕರು ಶಾಶ್ವತ ಮನೆ ನಿರ್ಮಾಣ ಮಾಡಿಕೊಡುವ ಭರವಸೆಯನ್ನಷ್ಟೇ ನೀಡಿದ್ದಾರೆಯೇ ವಿನಃ ಬಡವರಿಗಾಗಿ ಮನೆ ಮಂಜೂರು ಮಾಡಿಲ್ಲ. ಮತ ನೀಡಿದ ಜನರಿಗೆ ನ್ಯಾಯ ಒದಗಿಸುತ್ತಿದ್ದೇನೆಯೇ ಎಂಬುದಾಗಿ ಶಾಸಕರೇ ನೀವೇ ಆತ್ಮ ವಿಮರ್ಶೆ ಮಾಡಿಕೊಳ್ಳಿ. ಬಡವರಿಗೆ ಒಂದೇ ಒಂದು ಮನೆಯನ್ನು ಮಂಜೂರು ಮಾಡಿಸಲು ಸಾಧ್ಯವಾಗಿಲ್ಲ ಎಂದರೆ ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದರು.

ಮತ್ತಿಘಟ್ಟ ಗ್ರಾ.ಪಂ ಸದಸ್ಯ ನಾರಾಯಣ ಮತ್ತಿಘಟ್ಟ ಮಾತನಾಡಿ, ದೇವನಮನೆ ಗ್ರಾಮದಲ್ಲಿ ಅಂಗನವಾಡಿ ಕಾಮಗಾರಿಗೆ ಕಳೆದ ಮೇ ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ ಇದುವರೆಗೂ ಕಾಮಗಾರಿ ಆರಂಭವೇ ಆಗಿಲ್ಲ. ಸಂಬಂಧ ಪಟ್ಟ ಇಂಜಿನೀಯರ್ ಕೇಳಿದರೆ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಮಕ್ಕಳಿಗೆ ಅಂಗನವಾಡಿ ಕಟ್ಟಡ ಇಲ್ಲದೆ ಅವರಿವರ ಮನೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಹೀಗಿರುವಾಗ ಗುದ್ದಲಿ ಪೂಜೆಗೆ ಅರ್ಥವೆಲ್ಲಿಂದ ಬರುತ್ತದೆ ? ಎಂದು ಪ್ರಶ್ನಿಸಿದರು.

ಕೊಡ್ನಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಹೆಗಡೆ ಮಾತನಾಡಿ , ಈ ಹಿಂದೆ ಮನೆ ಹಾನಿಯಾದಾಗ ನಾಲ್ಕರಿಂದ ಐದು ಲಕ್ಷದವರೆಗೆ ಪರಿಹಾರ ಬರುತ್ತಿತ್ತು. ಕಳೆದು ಎರಡು ಮೂರು ವರ್ಷದಿಂದ ಈಚೆಗೆ ಪರಿಹಾರದ ಕೊನೆಯ ಕಂತು ಇಂದಿಗೂ ಬಿಡುಗಡೆ ಆಗುತ್ತಿಲ್ಲ. ಕೇಳಿದರೆ ಹಾರಿಕೆ ಉತ್ತರವಷ್ಟೇ ಸಿಗುತ್ತಿದೆ. ವಸತಿ ನಿಗಮಗಳ ಮನೆಗೂ ಸರಿಯಾಗಿ ಅನುದಾನ ಬಿಡುಗಡೆ ಆಗಿಲ್ಲ. ಮನೆ ಕಟ್ಟಿ ವರ್ಷ ಕಳೆದರು ಹಣ ಬಿಡುಗಡೆ ಆಗುತ್ತಿಲ್ಲ. ಶಾಸಕರು ಈ ವಿಷಯದ ಕುರಿತಾದ ಗೊಂದಲ ಪರಿಹರಿಸಿ ಸ್ಪಷ್ಟನೆ ನೀಡಬೇಕೆಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ್ ಸಾಲೇರ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯ್ಕ್ , ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಬಳ್ಳಾರಿ, ಪ್ರಮುಖರಾದ ಜಿ.ಎಸ್.ಹೆಗಡೆ ಉಪಸ್ಥಿತರಿದ್ದರು.

 

 

“ಬಡ ರೈತರ ಮೇಲೆ ಅರಣ್ಯ ಅಧಿಕಾರಿಗಳ ದರ್ಬಾರ್:”

ಸಿದ್ದಾಪುರದ ಬಿಳಗಿ ಪಂಚಾಯತ್ ಗೋಳಿಕೈನಲ್ಲಿ ರೈತರೊಬ್ಬರ ತೋಟದ ಅಡಿಕೆ ಮರಗಳನ್ನು ಅರಣ್ಯ ಅಧಿಕಾರಿಗಳು ಕಡಿದಿರುವಂತಹ ಅಮಾನವೀಯ ಘಟನೆ ನಡೆದಿದೆ. ಇದಕ್ಕೂ ಮುಂಚೆ ಸಿದ್ದಾಪುರದ ತಾಲೂಕಿನ ಮಂಜುನಾಥ್ ನಾಯ್ಕ ಎಂಬುವವರ ಅಡಿಕೆ ಸಸಿಗಳನ್ನು ಕಿತ್ತೆಸಿಯುವ ಮೂಲಕ ಅರಣ್ಯ ಅಧಿಕಾರಿಗಳು ದೌರ್ಜನ್ಯ ಮೆರೆದಿದ್ದರು. ಬಿಜೆಪಿಗರು ಅರಣ್ಯ ಇಲಾಖೆಯ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ ಮಾಡಿದಂತಹ ಸಂದರ್ಭದಲ್ಲಿ ಬಡವರ ಮೇಲೆ ದೌರ್ಜನ್ಯ ಮೆರೆಯದಂತೆ ಆಗ್ರಹಿಸಿದ್ದರೂ ಕೂಡ ಮತ್ತೆ ಅದೇ ಪುನರಾವರ್ತನೆ ಆಗಿರುವುದು ಖಂಡನೀಯ. ಗೋಳಿಕೈನಲ್ಲಿ ಹಾನಿಗೀಡಾದ ಸ್ಥಳಕ್ಕೆ ಶಾಸಕರು ಭೇಟಿ ನೀಡಬೇಕು. ಅರಣ್ಯ ಸಚಿವರಾದ ಖಂಡ್ರೆ ಅವರಿಗೆ ವಸ್ತು ಸ್ಥಿತಿ ಅರ್ಥ ಮಾಡಿಸಿ, ಶಾಸಕರು ಕ್ಷೇತ್ರದ ಜನರ ವಿಷಯದಲ್ಲಿ ಗಟ್ಟಿಯಾಗಿ ಧ್ವನಿ ಎತ್ತಲಿ. ಅತಿಕ್ರಮಣದಾರರ ಮೇಲಿನ ಅರಣ್ಯ ಇಲಾಖಾ ಅಧಿಕಾರಿಗಳ ದೌರ್ಜನ್ಯ ಮಿತಿ ಮೀರಿದೆ. ಇತ್ತೀಚಿನ ಕೆಲ ದಿನಗಳಲ್ಲಿ ಅರಣ್ಯ ಅಧಿಕಾರಿಗಳ ದೌರ್ಜನ್ಯದ ಕುರಿತಾಗಿ ಹೆಚ್ಚಿನ ಪ್ರಕರಣಗಳು ಕೇಳಿ ಬರುತ್ತಿವೆ. ಬಿಜೆಪಿಗರು ದೌರ್ಜನ್ಯ ವಿರೋಧಿಸಿ ಧರಣಿ ನಡೆಸಿ ಮನವಿ ನೀಡಿದ ನಂತರವೂ ಮತ್ತದೇ ದೌರ್ಜನ್ಯ ಮುಂದುವರೆಯುತ್ತಿದೆ. ಇವರೇನು ಅರಣ್ಯ ಅಧಿಕಾರಿಗಳೇ ಅಥವಾ ಢಕಾಯಿತರೆ ? ಅರಣ್ಯ ಅಧಿಕಾರಿಗಳ ಈ ಅಮಾನವೀಯ ನಡೆಯ ಕುರಿತು ಶಾಸಕರು ಗಮನ ಹರಿಸಲಿ. ಅರಣ್ಯ ಇಲಾಖೆ ಕೇಂದ್ರ ಸರಕಾರದ ಅಧೀನದಲ್ಲಿದೆ ಎಂಬ ತಪ್ಪು ಕಲ್ಪನೆಯಿಂದ ಶಾಸಕರು ಹೊರಬರಲಿ. ದೌರ್ಜನ್ಯದ ಕುರಿತು ಸಚಿವರ ಗಮನಕ್ಕೆ ತರಲಿ ಎಂದರು.

 

,”ಶಾಸಕರ ಗುದ್ದಲಿ ಪೂಜೆಯೆಂಬುದು ಕಾಮಿಡಿ ಶೋ”

ಶಾಸಕರು ಗುದ್ದಲಿ ಪೂಜೆ ಮಾಡಿರುವುದರಲ್ಲಿ‌ 90% ಕೆಲಸಗಳು ಇನ್ನೂ ಆರಂಭವಾಗಿಯೇ ಇಲ್ಲ. ಕ್ಷೇತ್ರದ ಅನೇಕ ಕಡೆ ಗುದ್ದಲಿ ಪೂಜೆ ನಡೆದು ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ ಎಂದು, ಸ್ಥಳೀಯರು ವ್ಯಂಗ್ಯವಾಡುತ್ತಿದ್ದಾರೆ. ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ಎನ್ನುವುದು ಕಾಮಿಡಿ ಶೋ ಆಗಿ ಬಿಟ್ಟಿದೆ. ಕಾಮಗಾರಿ ಆರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸುತ್ತಾರೋ ಅಥವಾ ಕಾಮಗಾರಿಗೆ ಅರ್ಜಿ ನೀಡುವ ಮುಂಚೆ ಗುದ್ದಲ್ಲಿ ಪೂಜೆ ಆರಂಭಿಸುತ್ತಾರೋ ಎಂಬುದೇ ಶಾಸಕರಿಗೆ ತಿಳಿದಂತಿಲ್ಲ. ಗುದ್ದಲಿ ಪೂಜೆಯನ್ನು ಮಾಡಿದ ನಂತರ ಕಾಮಗಾರಿಯನ್ನು ಪೂರ್ಣಗೊಳಿಸುವ ಸಂಪೂರ್ಣ ಜವಾಬ್ದಾರಿ ಶಾಸಕರದ್ದೇ ಆಗಿರುತ್ತದೆ ಎಂದರು.

 

ಈ ಬಾರಿಯ ಶಿರಸಿ ಜಾತ್ರೆಗಾದರೂ ಶಾಸಕರು ಸರಕಾರದಿಂದ ಕನಿಷ್ಟಪಕ್ಷ 5 ಕೋಟಿ ರೂಪಾಯಿ ತರಬೇಕೆಂದು ಸಮಸ್ತ ಕ್ಷೇತ್ರದ ಜನತೆ, ಶಕ್ತಿ ದೇವತೆ ಮಾರಿಕಾಂಬಾ ದೇವಿಯ ಭಕ್ತಾದಿಗಳ ಪರವಾಗಿ ಶಾಸಕರಲ್ಲಿ ಆಗ್ರಹಿಸುತ್ತೇನೆ. – ಅನಂತಮೂರ್ತಿ ಹೆಗಡೆ, ಬಿಜೆಪಿ ಮುಖಂಡರು