ಸುದ್ಧಿಕನ್ನಡ ವಾರ್ತೆ
Goa: ಗೋವಾದ ಕಡಲ ಗಡಿಗೆ ಅಕ್ರಮವಾಗಿ ನುಗ್ಗಿ ಬುಲ್ ಟ್ರಾಲಿಂಗ್ ಮಾಡುತ್ತಿದ್ದ ಕರ್ನಾಟಕದ ಮಲ್ಪೆಯ 2 ಮೀನುಗಾರಿಕಾ ಬೋಟ್ ಗಳನ್ನು ಗೋವಾ ರಾಜ್ಯ ಮೀನುಗಾರಿಕೆ ಇಲಾಖೆ ವಶಪಡಿಸಿಕೊಂಡಿದೆ. ಶನಿವಾರ ಮುಂಜಾನೆ 5 ಗಂಟೆಯ ಸುಮಾರು ಈ ಘಟನೆ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಕರಾವಳಿ ಪೊಲೀಸರು ಮತ್ತು ಸ್ಥಳೀಯ ಮೀನುಗಾರರು ಪಾಲ್ಗೊಂಡಿದ್ದರು. ವಷಪಡಿಸಿಕೊಂಡ ಬೋಟ್ ಗಳಲ್ಲಿದ್ದ ಮೀನುಗಳನ್ನು ಹರಾಜು ಹಾಕಿ ಬೋಟ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ರಾಜ್ಯ ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್ ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಮಲ್ಪೆಯಿಂದ ಮೀನುಗಾರಿಕಾ ಬೋಟ್ ಗಳು ಗೋವಾ ಕಡಲ ಗಡಿ ಪ್ರವೇಶಿಸಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿವೆ ಎಂದು ಸ್ಥಳೀಯ ಮೀನುಗಾರರು ದೂರು ನೀಡಿದ್ದರು. ಆ ಬೋಟ್ ನಲ್ಲಿದ್ದ ಮೀನುಗಾರರು ಸ್ಥಳೀಯರಿಗೆ ತೊಂದರೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಪೊಲೀಸರಿಗೆ ದೂರು ಕೂಡ ಸಲ್ಲಿಕೆಯಾಗಿತ್ತು. ಇದಾದ ಬಳಿಕ ಗೋವಾ ರಾಜ್ಯ ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್ ಅವರು ಕರ್ನಾಟಕ ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.
ಆದರೆ, ಮಲ್ಪೆಯಿಂದ ಬರುತ್ತಿದ್ದ ಮೀನುಗಾರಿಕಾ ಬೋಟ್ ಗಳು ಗೋವಾ ಪ್ರದೇಶವನ್ನು ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದವು ಎಂಬ ಆರೋಪವಿದೆ. ಇದಾದ ಬಳಿಕ ಇಂತಹ ಘಟನೆಗಳನ್ನು ತಡೆಯಲು ಗೋವಾ ರಾಜ್ಯ ಮೀನುಗಾರಿಕೆ ಇಲಾಖೆ ವಿಶೇಷ ಕಾರ್ಯಪಡೆಯನ್ನು ನೇಮಿಸಿತ್ತು. ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ರವರು ಅಂತಹ ಬೋಟ್ ಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದರು. ಶನಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಕರ್ನಾಟಕದ ಮಲ್ಪೆ ಮೀನುಗಾರಿಕಾ ಬೋಟ್ ನ್ನು ವಷಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಇನ್ನೆರಡು ಬೋಟ್ ಗಳನ್ನು ಪರಾರಿಯಾಗುವಲ್ಲಿ ಯಶಸ್ವಿಯಾಗಿದೆ ಎಂದು ಗೋವಾ ಮೀನುಗಾರಿಕಾ ಇಲಾಖೆ ಮಾಹಿತಿ ನೀಡಿದೆ. ವಶಪಡಿಸಿಕೊಂಡ ಮೀನುಗಾರಿಕಾ ಬೋಟ್ ನ್ನು ಪಣಜಿ ಜೆಟ್ಟಿಗೆ ತರಲಾಗಿದೆ. ಅಕ್ರಮ ಒಳ ನುಸುಳುವಿಕೆಯ ವಿರುದ್ಧ ಇದೇ ರೀತಿ ಕ್ರಮ ಮುಂದುವರಿಯಲಿದೆ ಎಂದು ಸಚಿವ ಹಳರ್ಣಕರ್ ಮಾಹಿತಿ ನೀಡಿದ್ದಾರೆ.
ದಂಡದ ಮೊತ್ತ ಹೆಚ್ಚಿಸಲು ಪ್ರಸ್ತಾವನೆ
ಮೀನುಗಾರಿಕಾ ಇಲಾಖೆಯ ಅಧೀಕ್ಷಕ ಚಂದೇಶ ಚಂದ್ರೇಶ ಹಳದನಕರ ಮಾತನಾಡಿ, ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ನೀಡಿದ ಆದೇಶದಂತೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಅದರಂತೆ ಈ ಕ್ರಮ ಕೈಗೊಂಡಿದ್ದೇವೆ. ವಶಪಡಿಸಿಕೊಂಡ ಮೀನುಗಾರಿಕಾ ಬೋಟ್ ಗಳ ಮಾಲೀಕರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು. ದಂಡದ ಮೊತ್ತವನ್ನು ರೂ. 10 ಲಕ್ಷಕ್ಕೆ ಹೆಚ್ಚಿಸಲು ಇಲಾಖೆ ಪ್ರಕ್ರಿಯೆ ಆರಂಭಿಸಿದೆ. ಕಾನೂನು ಬದಲಾದರೆ ಈ ಮೊತ್ತವನ್ನು ಹೆಚ್ಚಿಸಲಾಗುವುದು ಎಂಬ ಮಾಹಿತಿ ನೀಡಿದರು.