ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ನೈಟ್ ಕ್ಲಬ್ ನಲ್ಲಿ  (Night Club) ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಜನ ಸಾವನ್ನಪ್ಪಿದ್ದರು. ಇದೇ ಸಂದರ್ಭದಲ್ಲಿ ಇಂಡಿಗೊ ವಿಮಾನ (Indigo Flight)  ಕಂಪನಿಯ ಹಲವು ವಿಮಾನ ಹಾರಾಟವೂ ರದ್ದಾಗಿತ್ತು. ಈ ಎರಡೂ ಘಟನೆಗಳಿಂದ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆಯೇ..?ಮುಂಬರುವ ದಿನಗಳಲ್ಲಿ ಈ ಘಟನೆಗಳು ಗೋವಾದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲಿದೆಯೇ..? ಎಂಬ ಪ್ರಶ್ನೆಗೆ ಗೋವಾ ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ 2025 ರಲ್ಲಿ ಗೋವಾಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ ಎಂದು ರಾಜ್ಯ ಪ್ರವಾಸೊದ್ಯಮ ಸಚಿವ ರೋಹನ್ ಖಂವಟೆ ಮಾಹಿತಿ ನೀಡಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಏರಿಳಿಕೆ ಆಗುತ್ತಲೇ ಇರುತ್ತದೆ. ಇಂಡಿಗೊ ಕಂಪನಿಯ ಸಮಸ್ಯೆಯಿಂದಾಗಿ ಶೇ 30 ರಷ್ಟು ವಿಮಾನ ಸೇವೆಗಳಿಗೆ ಪರಿಣಾಮವಾಗಿದೆ. ಆ ಸಂದರ್ಭದಲ್ಲಿ ಇಂಡಿಗೋದ ಹಲವು ವಿಮಾನಗಳು ರದ್ದಾಗಿದ್ದವು, ಹಲವು ವಿಳಂಭವಾಗಿದ್ದವು. ಈ ಕುರಿತು ವಿಮಾನ ಪ್ರಾಧಿಕಾರದೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿತ್ತು. 2026 ರಲ್ಲಿಯೂ ಪ್ರಸಕ್ತ ವರ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದಾರೆ ಎಂದು ರೋಹನ್ ಖಂವಟೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೋವಾದಲ್ಲಿ ಡಿಸೆಂಬರ್ 6 ರಂದು ಬರ್ಚ ಬಾಯ್ ರೋಮಿಯೊ ಲೆನ್ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 25 ಜನ ಸಾವನ್ನಪ್ಪಿದ್ದರು. ಇದರಿಂದಾಗಿ ಗೋವಾದಲ್ಲಿ ನಡೆಯುತ್ತಿದ್ದ ಅಕ್ರಮ ಡಾನ್ಸ ಬಾರ್ , ನೈಟ್ ಕ್ಲಬ್ ಗಳ ಸುರಕ್ಷತೆಯ ಪ್ರಶ್ನೆ ಎದುರಾಗಿತ್ತು.

ಈ ಘಟನೆಯ ನಂತರ ಗೋವಾ ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಎಲ್ಲ ನೈಟ್ ಕ್ಲಬ್ ಗಳ ತಪಾಸಣೆ ಕೈಗೊಂಡಿತ್ತು. ಅಕ್ರಮ ಕ್ಲಬ್ , ಡಾನ್ಸ ಬಾರ್ ಗಳಿಗೆ ಬೀಗ ಹಾಕುವ ಕಾರ್ಯವನ್ನು ಗೋವಾ ಸರ್ಕಾರ ಕೈಗೊಂಡಿದೆ. ಗೋವಾದ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಅಗ್ನಿ ದುರಂತದ ಪರಿಣಾಮ ಗೋವಾ ಪ್ರವಾಸೋದ್ಯಮದ ಮೇಲೆ ಬಿದ್ದರೂ ಕೂಡ ಅದು ಕೇವಲ ಕೆಲವು ದಿನಗಳಿಗೆ ಮಾತ್ರ, ನಂತರ ಇದು ಚೇತರಿಕೆಯಾಗಲಿದೆ ಎಂಬುದು ಹಲವರ ಅಭಿಪ್ರಾಯ.

ಗೋವಾದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕೆಲವೇದಿನಗಳು ಬಾಕಿ ಉಳಿದಿದೆ. ಗೋವಾಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದಾರೆ. ಕ್ರಿಸ್ ಮಸ್ ನಿಂದ ಹೊಸ ವರ್ಷದ ವರೆಗೆ ಈಗಾಗಲೇ ಗೋವಾದ ಎಲ್ಲ ಹೋಟೆಲ್ ರೂಂಗಳು ಮುಂಗಡವಾಗಿ ಬುಕ್ ಆಗಿದೆ. ಇದರಿಂದಾಗಿ ಈ ಯಾವುದೇ ಘಟನೆಗಳು ಗೋವಾ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿಲ್ಲ ಎಂಬುದು ಸ್ಪಷ್ಟವಾಗುತ್ತದೆ.