ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪರ್ವರಿಯಲ್ಲಿ ಬುಧವಾರ ವಿಚಿತ್ರ ಹಾಗೂ ಆತಂಕಕಾಗಿ ಘಟನೆಯೊಂದು ನಡೆದಿದೆ. ಬಿಯರ್ ಬಾಟಲಿಗಳಿರುವ ಬಾಕ್ಸ ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ನಿಂದ ಬಿಯರ್ ಬಾಟಲಿ ತುಂಬಿದ ಹತ್ತಾರು ಬಾಕ್ಸಗಳು ರಸ್ತೆಯ ಮೇಲೆ ಬಿದ್ದಿದ್ದರಿಂದ ಎಲ್ಲ ಗಾಜಿನ ಬಾಟಲಿಗಳು ಒಡೆದು ಹೆಂಡದ ಹೊಳೆಯೇ ಹರಿದಿದೆ. ಈ ಘಟನೆಯಿಂದಾಗಿ ಇಡೀ ರಸ್ತೆ ಬಾಟಲಿ ತುಂಡುಗಳಿಂದ ತುಂಬಿ ವಾಹನ ಸಂಚಾರಕ್ಕೆ ಕೆಲ ಕಾಲ ಅಡ್ಡಿಯುಂಟಾಯಿತು.

ಬಿಯರ್ ಬಾಟಲಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ನಿಂದ ಬಿಯರ್ ಬಾಟಲಿ ಬಾಕ್ಸಗಳು ಇದ್ದಕ್ಕಿದ್ದಂತೆಯೇ ರಸ್ತೆ ಮೇಲೆ ಬಿದ್ದು ಬಾಟಲಿಗಳು ಚೂರು ಚೂರಾಗಿ ಬಿದ್ದಿದ್ದವು. ಹಲವರು ಈ ಬಾಟಲಿ ಚೂರುಗಳನ್ನು ರಾಶಿ ಹಾಕಿ ಬದಿಗೆಸೆಯಲು ಸಹಕರಿಸಿದರು. ಗಾಜಿನ ಬಾಟಲಿ ಚೂರುಗಳು ಇಡೀ ರಸ್ತೆಗೆ ಹರಡಿದ್ದರಿಂದ ಇಲ್ಲಿ ಅಪಘಾತದ ಭಯ ನಿರ್ಮಾಣವಾಗಿತ್ತು.

ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೋಲಿಸರು ಧಾವಿಸಿ ಬಂದರು. ಅಪಘಾತದ ಭೀತಿಯ ಹಿನ್ನೆಲೆಯಲ್ಲಿ ಪೋಲಿಸರು ಈ ಗಾಜಿನ ತುಂಡುಗಳನ್ನು ತೆರವುಗೊಳಿಸಲು ಕೂಡ ಹೆಚ್ಚಿನ ಪರಿಶ್ರಮ ಪಡಬೇಕಾಯಿತು. ರಸ್ತೆ ಸಂಪೂರ್ಣ ಸ್ವಚ್ಛವಾಗುವ ವರೆಗೂ ಹೆಚ್ಚು ಎಚ್ಚರಿಕೆ ತೆಗೆದುಕೊಂಡು ವಾಹನಗಳನ್ನು ಒಂದೇ ಬದಿಯಿಂದ ತೆರಳಲು ವ್ಯವಸ್ಥೆ ಮಾಡಲಾಗಿತ್ತು.