ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನಲ್ಲಿ ಹಾದು
ಹೋಗಿರುವ ಸದಾಶಿವಗಡ -ಔರಾಧ ರಾಜ್ಯ ಹೆದ್ದಾರಿ ನುಜ್ಜಿಯಿಂದ ಅಣಶಿಯವರೆಗೆ ಸಂಪೂರ್ಣ ಹಾಳಾಗಿದ್ದು, ತಕ್ಷಣ ದುರಸ್ತಿ ಪಡಿಸಬೇಕು ಹಾಗೂ ಬಿಎಸ್‌ಎನ್‌ಎಲ್ ಟವರ್‌ಗಳಿಗೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಮಂಗಳವಾರ ಜೋಯಿಡಾ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿರವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಜನರ ದಿನನಿತ್ಯದ ಓಡಾಟಕ್ಕೆ ಜೀವನಾಡಿಯಂತಿರುವ ಸದಾಶಿವಗಡ -ಔರಾಧ ರಾಜ್ಯ ಹೆದ್ದಾರಿ 34 ನುಜ್ಜಿಯಿಂದ ತಾಲೂಕಿನ ಗಡಿ ಬರಪಾಲಿಯವರೆಗೆ ಸಂಪೂರ್ಣ ಹಾಳಾಗಿದ್ದು, ರಾಜ್ಯ ಹೆದ್ದಾರಿಯ ರಸ್ತೆ ದುರಸ್ತಿ ಕುರಿತು ಹಲವು ಬಾರಿ ಮನವಿ ಸಲ್ಲಿಸಲಾಗಿದೆ.
ಶಾಲಾ,ಕಾಲೇಜಿನ ವಿದ್ಯಾರ್ಥಿಗಳು,ಗರ್ಭಿಣಿಯರು, ಬಾಣಂತಿಯರು, ವೃದ್ಧರು, ಮಕ್ಕಳು ಪ್ರತಿನಿತ್ಯ ನರಕ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿ ಪಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ತಾಲೂಕಿನ ಬಾಡಪೋಲಿ, ನುಜ್ಜಿ, ತೇರಾಳಿ, ಕುಂಡಲ, ಡಿಗ್ಗಿ, ಲಾಂಡೆ ಮುಂತಾದ ಕಡೆಗಳಲ್ಲಿ ಬಿಎಸ್‌ಎನ್‌ಎಲ್ ಟವರ್ ಗಳನ್ನು ನಿರ್ಮಿಸಿ,ಹಲವು ವರ್ಷಗಳಾಗಿದ್ದು, ಈವರೆಗೆ ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ನೆಟ್‌ವರ್ಕ್‌ಗಾಗಿ ಜನರು ದೂರದ ಪ್ರದೇಶಗಳಿಗೆ ಅಲೆಯುವಂತಾಗಿದೆ.ಆದಷ್ಟು ಶೀಘ್ರ ಮೊಬೈಲ್ ಟವರ್ ಗಳಿಗೆ ಸಂಪರ್ಕ ಕಲ್ಪಿಸುವ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸರೋಜಾ ದೇಸಾಯಿ, ಪ್ರಶಾಂತ ದೇವಳಿ, ಕಿರಣ ಹರಿಜನ, ವಿನಂತಿ ದೇಸಾಯಿ, ಸಂಗೀತಾ ದೇಸಾಯಿ, ಮನೀಷಾ ದೇಸಾಯಿ, ಜ್ಯೋತಿ ಸಾವಂತ ಇದ್ದರು.