ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಜನವಸತಿ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಗ್ರಾಮೀಣ ಭಾಗದ ಜನತೆ ಕಂಗಾಲಾಗಿದ್ದಾರೆ. ಇತ್ತೀಚಿನ ಕೆಲ ತಿಂಗಳಿಂದ ಮನೆಯಲ್ಲಿ ಸಾಕಿದ್ದ ದನಕರುಗಳು,ನಾಯಿ ಈ ಸಾಕುಪ್ರಾಣಿಗಳು ಚಿರತೆಗೆ ಆಹಾರವಾಗುತ್ತಿರುವುದು ಖೇದಕರ ಸಂಗತಿಯೇ ಆಗಿದೆ. ಶನಿವಾರ ಬೆಳಗಿನ ಜಾವ 3 ಗಂಟೆ 39 ನಿಮಿಷಕ್ಕೆ ಯಲ್ಲಾಪುರ ತಾಲೂಕಿನ ಮಾಳಕೊಪ್ಪದಲ್ಲಿ ನೇರವಾಗಿ ಚಿರತೆ ಮನೆಯಂಗಳಕ್ಕೆ ರಾಜಾರೋಷವಾಗಿ ಆಗಮಿಸದಿದೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ಮನೆಯ ಸದಸ್ಯರು ಬೆಳಿಗ್ಗೆ ಎದ್ದ ನಂತರ ಸಿಸಿಟಿವಿ ಫುಟೇಜ್ ವೀಕ್ಷಿಸಿದಾಗ ಚಿರತೆ ಮನೆಯಂಗಳಕ್ಕೆ ಬಂದು ನಾಯಿ ಅಥವಾ ದನಕರುಗಳನ್ನು ಹೊತ್ತೊಯ್ಯಲು ಪ್ರಯತ್ನ ನಡೆಸಿರುವುದು ಕಂಡುಬಂದಿದೆ. ಈ ದೃಶ್ಯ ಕಂಡು ಮನೆಯ ಸದಸ್ಯರು ಬೆಚ್ಚಿಬಿದ್ದಿದ್ದಾರೆ.

ಯಲ್ಲಾಪುರ ವಿಕಾಸ ಅರ್ಬನ್ ಬ್ಯಾಂಕ್ ಎಂ.ಡಿ ಉಮೇಶ್ ಗೋಪಾಲ್ ಭಾಗ್ವತ್ ರವರ ಮನೆಗೂ ಕೂಡ ಕಳೆದ ವರ್ಷ ದೊಡ್ಡ ಚಿರತೆಯೊಂದು ಬಂದು ಇವರು ಸಾಕಿದ್ದ ನಾಯಿಯನ್ನು ಹೊತ್ತೊಯ್ದಿತ್ತು. ಕಳೆದ ವಾರ ಕೂಡ ಇವರ ಮನೆಗೆ ಮತ್ತೆ ಚಿರತೆ ಬಂದು ನಾಯಿ ಹಿಡಿಯಲು ಪ್ರಯತ್ನಿಸಿತ್ತು. ಆದರೆ ನಾಯಿಯನ್ನು ಪಂಜರದಲ್ಲಿ ಹಾಕಿದ್ದರಿಂದ ನಾಯಿ ಹೊತ್ತೊಯ್ಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇಂದಹದ್ದೇ ಘಟನೆ ಹಳ್ಳಿ ಹಳ್ಳಿಯಲ್ಲಿಯೂ ನಡೆಯುತ್ತಿದೆ. ರಾಮನಗುಳಿ ಬಳಿ ಚಿರತೆಯೊಂದು ಕಳೆದ ವಾರವಷ್ಟೇ ಆಕಳು ಕರುವನ್ನು ತಿಂದುಹಾಕಿತ್ತು. ಇಂತಹ ಘಟನೆಯಿಂದಾಗಿ ಯಲ್ಲಾಪುರ ತಾಲೂಕಿನ ಜನತೆ ಕಂಗಾಲಾಗಿದ್ದು ರಾತ್ರಿ ಮನೆಯಿಂದ ಹೊರ ಬರಲು ಕೂಡ ಭಯಪಡುವಂತಾಗಿದೆ.