ಸುದ್ದಿ ಕನ್ನಡ ವಾರ್ತೆ
ದಾಂಡೇಲಿ: ಅಪೂರ್ವ ಕಲೆ, ಸಂಸ್ಕೃತಿ ಹಾಗೂ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ದಾಂಡೇಲಿ ನಗರದಲ್ಲಿ ಇಂದು ಮೂರು ದಿನಗಳ ಕಾಲ ನಡೆಯುತ್ತಿರುವ ಉತ್ತರ ಕನ್ನಡ ಜಿಲ್ಲೆಯ ೨೫ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಆರ್ ವಿ ದೇಶಪಾಂಡೆ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಅವರು ಸಮ್ಮೇಳನದ ಸ್ಮರಣ ಸಂಚಿಕೆ ಹಾಗೂ ಪುಸ್ತಕಗಳನ್ನು ಅನಾವರಣಗೊಳಿಸಿದರು.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ವಿಕಾಸದಲ್ಲಿ ಸಾಹಿತ್ಯ ಸಮ್ಮೇಳನಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವುಗಳು ಇಂದಿನ ಪೀಳಿಗೆಯಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಮತ್ತು ಅರಿವು ಬೆಳೆಸುವ ಶಕ್ತಿಯುತ ವೇದಿಕೆಗಳಾಗಿವೆ. ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿಂತಕರು ಮತ್ತು ಸಾಹಿತಿಗಳ ವಿಚಾರ ವಿನಿಮಯದ ಮೂಲಕ ಈ ಸಮ್ಮೇಳನವು ಸಾರ್ಥಕತೆ ಪಡೆದು ಯಶಸ್ವಿಯಾಗಲಿ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ವೈವಿಧ್ಯಮಯ ಸಂಸ್ಕೃತಿ, ಪ್ರತಿಭೆ ಮತ್ತು ಸೃಜನಶೀಲತೆಯನ್ನು ದೇಶಾದ್ಯಂತ ಪರಿಚಯಿಸುವ ಮಹತ್ವದ ವೇದಿಕೆಯಾಗಲಿ ಎಂದು ದೇಶಪಾಂಡೆ ಅವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಾದ ಶ್ರೀ ರೋಹಿದಾಸ್ ನಾಯಕ್, ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀ ಬಿ.ಎನ್. ವಾಸರೆ, ನಗರಸಭೆ ಅಧ್ಯಕ್ಷರು, ಸಾಹಿತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
