ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯವು ಒಂದು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಗೋವಾಕ್ಕೆ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಗೋವಾದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ನೆರೆಯ ರಾಜ್ಯ ಕರ್ನಾಟಕದಿಂದ ಈ ಸಂದರ್ಭದಲ್ಲಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಗಣನೀಯವಾಗಿರುತ್ತದೆ. ಗೋವಾ ರಾಜ್ಯವು ಕೇವಲ ಬೀಚ್ ಗಳಿಂದ ಮಾತ್ರವಲ್ಲದೆಯೇ ಧಾರ್ಮಿಕ ಸ್ಥಳಗಳಿಂದಲೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದರಿಂದಾಗಿ ಕರ್ನಾಟಕದಿಂದ ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಮೊದಲು ಇಲ್ಲಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ನಂತರ ಬೀಚ್ ಮತ್ತು ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ.

ಮೊದಲು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ...
ಗೋವಾ ರಾಜ್ಯದಲ್ಲಿ ಪುರಾತನ ದೇವಾಲಯಗಳಿವೆ, ಮಠಮಾನ್ಯಗಳಿವೆ. ಗೋವಾ ರಾಜ್ಯವು ಧಾರ್ಮಿಕ ಪ್ರವಾಸೋದ್ಯಮಕ್ಕೂ ಪ್ರಸಿದ್ಧಿ ಪಡೆದಿದೆ. ವಿದೇಶಿಗರು ಕೂಡ ನಮ್ಮ ಭಾರತೀಯ ಸಂಸ್ಕøತಿಯನ್ನು ಅನುಸರಿಸುತ್ತಿರುವ ಈ ಸಂದರ್ಭದಲ್ಲಿ ನಾವು ಭಾರತೀಯರು ಮೊದಲು ನಮ್ಮ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲೇಬೇಕು. ಗೋವಾದ ಪೊಂಡಾ ಭಾಗದಲ್ಲಿ ಮಂಗೇಶಿ, ನಾಗೇಶಿ, ಮಹಾಲಕ್ಷ್ಮೀ, ಬಾಲಾಜಿ ದೇವಸ್ಥಾನಗಳಿವೆ. ವಾಸ್ಕೊ ದಾಮೋಲಿಂ ವಿಮಾನ ನಿಲ್ದಾಣದ ಬಳಿ ಬಿರ್ಲಾ ಟೆಂಪಲ್ , ವೆರ್ಣಾದಲ್ಲಿ ಮಹಾಲಸಾ ದೇವಸ್ಥಾನವಿದೆ. ಗೋವಾ ರಾಜ್ಯಾದ್ಯಂತ ನೂರಾರು ಪ್ರಸಿದ್ಧ ದೇವಸ್ಥಾನಗಳಿವೆ. ಈ ಧಾರ್ಮಿಕ ಸ್ಥಳಗಳಿಗೆ ಮೊದಲು ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಮುಂದೆ ಸಾಗಬಹುದು. ಗೋವಾದ ಕಾಣಕೋಣದ ಶ್ರೀಗೋಕರ್ಣ ಪರ್ತಗಾಳಿ ಮಠದಲ್ಲಿ ಏಷ್ಯದ ಅತಿ ಎತ್ತರದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪರ್ತಗಾಳಿ ಮಠದಲ್ಲಿಯೇ ವೀಕ್ಷಿಸಲು ಸಾಕಷ್ಠಿದೆ. ಇದರಿಂದಾಗಿ ಇಂತಹ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ನಂತರ ಗೋವಾದಲ್ಲಿ ಬೀಚ್ ಗಳಿಗೆ ತೆರಳಬಹುದಾಗಿದೆ.

ಬೀಚ್ ಪ್ರವಾಸೋದ್ಯಮ…
ಗೋವಾದಲ್ಲಿ ಹತ್ತಾರು ಪ್ರಸಿದ್ಧ ಬೀಚ್ ಗಳಿವೆ. ಉತ್ತರ ಗೋವಾದಲ್ಲಿರುವ ಕಲಂಗುಟ್, ವಾಗತೋರ್, ಶಿಕೇರಿ, ಬಾಗಾ, ಮೀರಾಮಾರ್ ಬೀಚ್ ಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಅಂತೆಯೇ ಪಣಜಿ ಸಮೀಪದ ದೋನಾಪಾವುಲ್ ನಲ್ಲಿ ಸೂರ್ಯಾಸ್ತ ವೀಕ್ಷಣೆಗೆ ತೆರಳಬಹುದು. ಪಣಜಿಯಲ್ಲಿ ಸಂಜೆ 5.30 ರಿಂದ ಕ್ರೂಜ್ ಬೋಟ್ ನಲ್ಲಿ ತೆರಳಬಹುದಾಗಿದೆ. ಇಷ್ಟೇ ಅಲ್ಲದೆಯೇ ಹಲವು ಮೋಲ್ ಗಳಿವೆ. ಇವೆಲ್ಲ ಪ್ರವಾಸಿ ತಾಣಗಳು ಕೂಡ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ದಕ್ಷಿಣ ಗೋವಾದ ಮಡಗಾಂವ ಕೋಲ್ವಾ ಬೀಚ್ ಕೂಡ ಪ್ರಸಿದ್ಧಿ ಪಡೆದಿದೆ.
ಪೊಂಡಾ ಮೀಪದ ಬೋಂಡ್ಲಾ ಪ್ರಾಣಿ ಸಂಗ್ರಹಾಲಯ, ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಕೂಡ ಆಕರ್ಷಣೆ ಪಡೆದಿದೆ. ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಧಾರ್ಮಿಕ ಪ್ರವಾಸೋದ್ಯಮದ ಮೂಲಕ ಇತರ ಪ್ರವಾಸಿ ತಾಣಗಳಿಗೆ ತೆರಳಿದರೆ, ನಿಮ್ಮ ಪ್ರವಾಕ್ಕೆ ಇನ್ನಷ್ಟು ಮಹತ್ವ ಬರಲಿದೆ.

ಎಚ್ಚರ…
ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಎಲ್ಲ ಎಲ್ಲ ನಿಯಮಾವಳಿಗಳನ್ನು ಖಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲವಾದಲ್ಲಿ ಹೆಚ್ಚಿನ ದಂಡ ತೆರಬೇಕಾಗಲಿದೆ. ಗೋವಾದಲ್ಲಿ ಹೆದ್ದಾರಿಯ ಪಕ್ಕದಲ್ಲಿರುವ ಸೂಚನಾ ಫಲಕದಲ್ಲಿರುವಷ್ಟೇ ವೇಗವಾಗಿ ವಾಹನ ಚಲಾಯಿಸಿ. ಸೀಟ್ ಬೆಲ್ಟ, ವಾಹನದ ಕಾಗದಪತ್ರಗಳನ್ನು ಖಡ್ಡಾಯವಾಗಿ ತನ್ನಿ. ಗೋವಾ ಗಡಿಯಲ್ಲಿ ಕ್ಯಾಮರಾ ಮೂಲಕ ವಾಹನಗಳ ತಪಾಸಣೆಯಾಗುತ್ತದೆ. ಒಂದು ವೇಳೆ ಯಾವುದೇ ಕಾಗದಪತ್ರವಿಲ್ಲದಿದ್ದರೆ ದಂಡ ಪಕ್ಕಾ. ಗೋವಾದಲ್ಲಿ ರಸ್ತೆ ಬದಿಯಲ್ಲಿ ಅಡುಗೆ ಬೇಯಿಸುವುದು, ಊಟ ಮಾಡುವುದಕ್ಕೆ ನಿಷೇಧವಿದೆ. ಹೀಗೆ ಎಲ್ಲ ನಿಯಮಾವಳಿಗಳನ್ನು ಖಡ್ಡಾಯವಾಗಿ ಪಾಲಿಸಿ. ಕರ್ನಾಟಕದಿಂದ ಬರುವ ಪ್ರವಾಸಿಗರೇ ನಿಮ್ಮ ಪ್ರವಾಸ ಸುಖಕರವಾಗಿರಲಿ.