ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ನಗರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಶಿರಸಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಳ್ಳತನ ನಡೆದ ನಾಲ್ಕೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಳ್ಳತನ ಪ್ರಕರಣದಲ್ಲಿ ರಾಮನಬೈಲ ನಿವಾಸಿ, ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಹೇಶ ಪರಸಪ್ಪ ಬೋವಿ (31) ಎಂಬ ಆರೋಪಿಯನ್ನು ಶಿರಸಿಯ ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ಮಾರಿಕಾಂಬಾ ನಗರದ 3ನೇ ಕ್ರಾಸ್ ನಿವಾಸಿ ಶಾಂತಲಾ ಶಾಂತಾರಾಮ ಕಿಣಿ ಅವರು ಡಿ. 7 ರಂದು ತಮ್ಮ ಕುಟುಂಬದೊಂದಿಗೆ ಗೋವಾಕ್ಕೆ ತೆರಳಿದ್ದರು. ಡಿ. 8 ರಂದು ಬೆಳಗಿನ ಜಾವ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ಕಳ್ಳರು ಮನೆಯ ಬೀಗ ಮುರಿದು ಸುಮಾರು 1.20 ಲಕ್ಷ ರೂ. ನಗದು ಹಾಗೂ 9.25 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದರು. ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಕಳ್ಳತನ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತಾಂತ್ರಿಕ ಸಾಕ್ಷ್ಯಾಧಾರಗಳು ಮತ್ತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ತಂಡವು ಗುರುವಾರ (ಡಿ.12) ಆರೋಪಿಯನ್ನು ಬಂಧಿಸಿದೆ.
ಈ ಪ್ರಕರಣದ ವಿಚಾರಣೆ ವೇಳೆ ಬಂದಿತ ಆರೋಪಿ ಮಹೇಶ ತಾನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದಲ್ಲಿ ಬಂದಿತ ಆರೋಪಿಯಿದ 8,75,000 ರೂ. ಮೌಲ್ಯದ ಚಿನ್ನಾಭರಣಗಳು, 70,000 ರೂ. ನಗದು ಹಣ ಹಾಗೂ ಕೃತ್ಯಕ್ಕೆ ಬಳಸಲಾದ 50,000 ರೂ. ಮೌಲ್ಯದ ಹೊಂಡಾ ಆಕ್ಟಿವಾ ಬೈಕ್ ಸೇರಿದಂತೆ ಒಟ್ಟು 9,95,000 ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಎಸ್.ಪಿ ದೀಪನ್ ಎಂ.ಎನ್, ಹೆಚ್ಚುವರಿ ಎಸ್.ಪಿಗಳಾದ ಕೃಷ್ಣಮೂರ್ತಿ ಜಿ., ಜಗದೀಶ ನಾಯ್ಕ ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ (ತನಿಖೆ) ನಾರಾಯಣ ರಾಥೋಡ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ತಂಡದಲ್ಲಿ ಸಿಬ್ಬಂದಿಗಳಾದ ರಾಮಯ್ಯ ಪೂಜಾರಿ, ಸದ್ದಾಂ ಹುಸೇನ್, ಹನುಮಂತ್ ಮಾಕಾಪೂರ, ಚನ್ನಬಸಪ್ಪ ಕ್ಯಾರಕಟ್ಟಿ, ಸುನೀಲ್, ಹನುಮಂತ ಕಬಾಡಿ, ರಾಜು ಎಮ್. ಹಾಗೂ ತಾಂತ್ರಿಕ ವಿಭಾಗದ ಉದಯ ಗುಣಗಾ ಮತ್ತು ಬಬನ ಕದಂ ಭಾಗವಹಿಸಿದ್ದರು.
