ಸುದ್ದಿ ಕನ್ನಡ ವಾರ್ತೆ
ಕಲಬುರಗಿ-ಕಲಬುರಗಿ ಬಸವ ಸಮಿತಿಯ ಅಕ್ಕನ ಬಳಗವು ಸತತವಾಗಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ `ಮಹಾದೇವಿಯಕ್ಕಗಳ ೧೫ನೇ ಸಮ್ಮೇಳನ’ ಇದೇ ತಿಂಗಳ ದಿನಾಂಕ ೧೩ ಮತ್ತು ೧೪ ರಂದು, ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ ಜರುಗಲಿದೆ.

ಸಮ್ಮೇಳನದ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾ ವಾಲಿ ಅವರು ಆಯ್ಕೆ ಆಗಿದ್ದಾರೆ. “ಡಾ. ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ-೨೦೨೫” ಈ ಪ್ರಶಸ್ತಿಯನ್ನು ಪ್ರಖ್ಯಾತ ರಾಜಕಾರಣಿಗಳು, ಮಾಜಿ ಮಂತ್ರಿಗಳು, ಸಾಹಿತಿಗಳು, ಅಕ್ಕಮಹಾದೇವಿ ಸಮಿತಿ, ಉಡುತಡಿ ಇದರ ಅಧ್ಯಕ್ಷರಾದ ಡಾ. ಲೀಲಾದೇವಿ ಆರ್. ಪ್ರಸಾದ ಅವರಿಗೆ ಕೊಡಮಾಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಸ್ಥಳೀಯರಾದ ವಿಭಿನ್ನ ಕಾಯಕದಲ್ಲಿ ನಿರತರಾಗಿರುವ ೫ ಜನ ಮಹಿಳೆಯರಿಗೆ ಗೌರವಿಸಿ ಸನ್ಮಾನಿಸಲಾಗುತ್ತದೆ.
ಈ ಸಮ್ಮೇಳನದ ವಿಶೇಷವೆಂದರೆ ೨೦೦ ಜನ ಮಹಿಳೆಯರೇ ಭಾಗವಹಿಸುವುದು. ಇವರಲ್ಲಿ ಗೃಹಿಣಿಯರ ಸಂಖ್ಯೆಯೇ ಹೆಚ್ಚಿಗಿರುತ್ತದೆ. ಜೊತೆಗೆ ಕಿರಿಯ ವಯಸ್ಸಿನ ಬಾಲಕಿಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿ ಕೊಡಲಾಗಿದೆ.

ದಿನಾಂಕ ೧೩ ರಂದು ಮುಂಜಾನೆ ಈ ಸಮ್ಮೇಳನವನ್ನು ಉದ್ಘಾಟಿಸುವವರು ಕಲಬುರಗಿ ಭಾಗದ ಪ್ರಖ್ಯಾತ ಜನಪದ ಹಾಡುಗಾರ್ತಿಯಾದ ನೆಲೋಗಿ ಗ್ರಾಮದ ಶ್ರೀಮತಿ ನೀಲಮ್ಮ ನೆಲೋಗಿ ಅವರು.

ಈ ಸಮ್ಮೇಳನದಲ್ಲಿ ಶರಣೆಯರ ಕುರಿತು ವಿಚಾರಗೋಷ್ಠಿಗಳು, ಜನಪದ ಹಾಡುಗಳು, ವಚನಗಳ ಗಾಯನ ಮತ್ತು ಚಿತ್ರ ಬಿಡುಸುವುದು, ಶರಣರ ಕುರಿತು ನಾಟಕ, ವಚನ ನೃತ್ಯ ಪ್ರದರ್ಶನಗಳೂ ನೆರವೇರಲಿವೆ.
ಕಲಬುರಗಿಯ ನಾಗರಿಕರು ಈ ಸಮ್ಮೇಳನಕ್ಕೆ ಪ್ರೇಕ್ಷಕರಾಗಿ ಹಾಜರಾಗಿ, ಪ್ರೋತ್ಸಾಹಿಸಬೇಕೆಂದು ಬಸವ ಸಮಿತಿ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಸಮ್ಮೇಳನದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀಮತಿ ಶರಣಮ್ಮ ಕಲಬುರಗಿ, ಕಾರ್ಯದರ್ಶಿಗಳಾದ ಶ್ರೀಮತಿ ಅನುಸುಯಾ ನಡಕಟ್ಟಿ, ಕಾರ್ಯಾಧ್ಯಕ್ಷರೂ ಸಂಚಾಲಕರೂ ಆದ ಡಾ. ಜಯಶ್ರೀ ದಂಡೆ ಅವರು ವಿನಂತಿಸಿಕೊಂಡಿದ್ದಾರೆ.