ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿರುವ ಬರ್ಚ ಬಾಯ್ ರೋಮಿಯೊ ಲೆನ್ ನೈಟ್ ಕ್ಲಬ್ (Bircha Boy Romeo Lane Night Club) ಅಗ್ನಿ ದುರಂತದಲ್ಲಿ 25 ಜನ ಸಾವನ್ನಪ್ಪಿದ ದುರ್ಘಟನೆಯ ನಂತರ ಥೈಲ್ಯಾಂಡ್ ಗೆ ಪರಾರಿಯಾಗಿದ್ದ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಲೂಥ್ರಾ ಹಾಗೂ ಗೌರವ್ ಲೂಥ್ರಾ ರವರನ್ನು ಥೈಲ್ಯಾಂಡ್ ಪೋಲಿಸರು ಗುರುವಾರ ಬಂಧಿಸಿದ್ದಾರೆ. ಆದರೆ ಅವರನ್ನು ಭಾರತಕ್ಕೆ ಕರೆತರಲು ವಿಳಂಭವಾಗುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.

ಈ ಕುರಿತಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ನೈಟ್ ಕ್ಲಬ್ ಮಾಲೀಕರಾದ ಲೂಥ್ರಾ ಸಹೋದರರ ಪಾಸ್ ಪೊರ್ಟಗಳನ್ನು (Passport)ರದ್ಧುಗೊಳಿಸಲಾಗಿದೆ. ಇದರಿಂದಾಗಿ ಭಾರತಕ್ಕೆ ಅವರನ್ನು ಮರಳಿ ಕರೆತರಲು ರಾಯಭಾರ ಕಛೇರಿಯಿಂದ ತುರ್ತು ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಈ ಪ್ರಮಾಣಪತ್ರವನ್ನು ಪಡೆಯಲು ಅಗತ್ಯವಾದ ಔಪಚಾರಿಕತೆಯನ್ನು ಪೂರ್ಣಗೊಳಿಸಿದ ನಂತರವೇ ಅವರನ್ನು ಭಾರತಕ್ಕೆ ಕರೆತರಲು ಸಾಧ್ಯವಾಗುತ್ತದೆ. ಶನಿವಾರ ಭಾನುವಾರ ರಜೆ ಇರುವುದರಿಂದ ಈ ಪ್ರಕ್ರಿಯೆ ಸೋಮವಾರ ಆರಂಭಗೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ಇವರನ್ನು ವಾಪಸ್ಸು ಕರೆತರಲು ಇನ್ನೂ ನಾಲ್ಕೈದು ದಿನ ವಿಳಂಭವಾಗುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.

ಗೋವಾದ ನೈಟ್ ಕ್ಲಬ್ ನಲ್ಲಿ ಕಳೆದ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದರು. ಈ ಘಟನೆಯ ನಡೆದ ಕೂಡಲೇ ಕ್ಲಬ್ ಮಾಲೀಕರಾದ ಲೂಥ್ರಾ ಸಹೋದರರು ಥೈಲ್ಯಾಂಡ್ ಗೆ ಪಲಾಯನಗೈದಿದ್ದರು. ಕೇಂದ್ರ ಸರ್ಕಾರವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಥೈಲ್ಯಾಂಡ್ ಸರ್ಕಾರವನ್ನು ಸಂಪರ್ಕಿಸಿತ್ತು ಎನ್ನಲಾಗಿದೆ. ಕೂಡಲೇ ಥೈಲ್ಯಾಂಡ್ ಪೋಲಿಸರು ಕಾರ್ಯಾಚರಣೆ ನಡೆಸಿ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.