ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಹಾಗೂ ಭಕ್ತರ ಆರಾಧ್ಯ ದೈವವಾಗಿರುವ ಶ್ರೀ ಗ್ರಾಮದೇವಿ ದೇವಸ್ಥಾನದ 2026ನೇ ಸಾಲಿನ ಜಾತ್ರಾ ಮಹೋತ್ಸವ 2026ರ ಫೆಬ್ರವರಿ 11 ರಿಂದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ದೇಶದ ಕಲ್ಯಾಣಾರ್ಥವಾಗಿ ಹಾಗೂ ಸುಭಿಕ್ಷಾರ್ಥವಾಗಿ ನಡೆಯುವ ಈ ಜಾತ್ರೆಗೆ ಶ್ರೀ ದೇವರಲ್ಲಿ ಅಪ್ಪಣೆ ಪಡೆದು ದಿನಾಂಕವನ್ನು ನಿಶ್ಚಯಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರಪ್ರಸಾದ ಬಲವಂತ ಭಟ್ ತಿಳಿಸಿದ್ದಾರೆ.
ಯಲ್ಲಾಪುರ ಗ್ರರಾಮದೇವಿಯರ ಜಾತ್ರೆಗೂ ಮುನ್ನ ನಡೆಯುವ ಸಂಪ್ರದಾಯದಂತೆ ಮೂರು ‘ಹೊರಮಂಗಳವಾರ’ಗಳ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಜನವರಿ 20 ರಂದು ಮೊದಲನೇ ಹೊರಮಂಗಳವಾರ. ಜನವರಿ 27 ರಂದು ಎರಡನೇ ಹೊರಮಂಗಳವಾರ. ಫೆಬ್ರುವರಿ 03 ರಂದು ಮೂರನೇ ಹೊರಮಂಗಳವಾರ (ರಾತ್ರಿ ಅಂಕೆ ಹಾಕುವುದು) ಆಚರಣೆ ನಡೆಯಲಿದೆ. (Yellapur Gramadevi jaatre-2026)
ಹೊರ ಮಂಗಳವಾರಗಳಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಭಕ್ತರು ಹೊರಬೀಡುಗಳಾಗಿ ಇರಬೇಕು.(ಮನೆಯಿಂದ ಹೊರಗೆ ಉಳಿಯಬೇಕು) ಈ ಸಮಯದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳಬೇಕು. ಧ್ವನಿವರ್ಧಕ, ಮೈಕ್ ಸೆಟ್ ಅಥವಾ ಡಿ.ಜೆ ಬಳಸಿ ಹಾಡು ಹಾಕುವುದು, ಕುಣಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಆಡಳಿತ ಮಂಡಳಿ ಎಚ್ಚರಿಸಿದೆ.
ಜಾತ್ರಾ ಕಾರ್ಯಕ್ರಮಗಳು:
ಫೆಬ್ರವರಿ 10, 2026ರ ಮಂಗಳವಾರ ದೇವಸ್ಥಾನದಲ್ಲಿ ಶ್ರೀ ಗ್ರಾಮದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ಫೆಬ್ರವರಿ 11ರ ಬುಧವಾರ ಮಧ್ಯಾಹ್ನ 3 ಗಂಟೆಯ ನಂತರ ದೇವಿಯರು ದೇವಸ್ಥಾನದಿಂದ ಗದ್ದುಗೆಗೆ ತೆರಳಲಿದ್ದಾರೆ.
ಭಕ್ತಾದಿಗಳು ಫೆಬ್ರವರಿ 12ರ ಬೆಳಿಗ್ಗೆ 7 ಗಂಟೆಯಿಂದ ಫೆಬ್ರವರಿ 19ರ ಮಧ್ಯಾಹ್ನ 1:30ರವರೆಗೆ ದೇವರಿಗೆ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. ಫೆಬ್ರುವರಿ 19 ರಂದು ಮಧ್ಯಾಹ್ನ 3:30ಕ್ಕೆ ಜಾತ್ರಾ ಮಂಟಪದಿಂದ ದೇವರು ಮೆರವಣಿಗೆಯ ಮೂಲಕ ಸೀಮಾಗಡಿಗೆ ತೆರಳಲಿದ್ದಾರೆ.ಈ ಮೂಲಕ ಜಾತ್ರೆ ಮುಕ್ತಾಯಗೊಳ್ಳಲಿದೆ.
ಅಂತಿಮವಾಗಿ ಫಾಲ್ಗುಣ ಮಾಸದ ಶುಕ್ಲ ಪಕ್ಷ ಚತುರ್ದಶಿ, ಅಂದರೆ ಮಾರ್ಚ್ 2, 2026ರ ಸೋಮವಾರದಂದು ದೇವಸ್ಥಾನದಲ್ಲಿ ಶ್ರೀ ದೇವಿಯರ ಪುನರ್ ಪ್ರತಿಷ್ಠಾಪನೆ ನೆರವೇರಲಿದೆ.

